ಕನ್ನಡಪ್ರಭ ವಾರ್ತೆ ಮಂಡ್ಯ
ಹನುಮಧ್ವಜ ವಿವಾದದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಕೆರಗೋಡು ಇದೀಗ ಗಣೇಶ ಪ್ರತಿಷ್ಠಾಪನೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೂ ಅಲೆ ಎಬ್ಬಿಸುವುದರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೊಳಪಡಿಸಿದ ನೆಲದಲ್ಲಿ ಜೆಡಿಎಸ್-ಬಿಜೆಪಿಗೆ ಠಕ್ಕರ್ ಕೊಡುವುದಕ್ಕೆ ಕೈ ಪಾಳಯ ಸಜ್ಜಾಗಿದೆ. ಅದಕ್ಕಾಗಿ ನ.೨೩ರಂದು ಅದ್ಧೂರಿಯಾಗಿ ಗಣೇಶನನ್ನು ವಿಸರ್ಜನೆ ಮಾಡುವುದಕ್ಕೆ ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.ಗೌರಿ-ಗಣೇಶ ಹಬ್ಬ ಮುಗಿದು ಎರಡೂವರೆ ತಿಂಗಳ ಬಳಿಕ ಕೆರಗೋಡಿನಲ್ಲಿ ಪಡುವಲಬಾಗಿಲು ಶ್ರೀಗಣೇಶೋತ್ಸವ ಸಮಿತಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದೆ. ಇದರ ಹಿಂದೆ ರಾಜಕೀಯ ಅಡಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಿಂದೂ ಫೈರ್ ಬ್ರ್ಯಾಂಡ್ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೆರಗೋಡಿಗೆ ಕರೆಸಿ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗಣೇಶ ವಿಸರ್ಜನೆ ಮಾಡಿದ ರೀತಿಯಲ್ಲೇ ಕಾಂಗ್ರೆಸ್ ಈಗ ಗಣೇಶ ವಿಸರ್ಜನೆ ಮಾಡುವುದಕ್ಕೆ ಪಣ ತೊಟ್ಟಿದೆ. ಆ ಮೂಲಕ ಕಾಂಗ್ರೆಸ್ ವೈರಿ ಪಕ್ಷಗಳೆದುರು ತೊಡೆ ತಟ್ಟಿದೆ.
ಸುಮಾರು ಎರಡು ವರ್ಷದ ಹಿಂದೆ ಕೆರಗೋಡಿನಲ್ಲಿ ಅನಿರೀಕ್ಷಿತವಾಗಿ ಸೃಷ್ಟಿಯಾದ ಹನುಮ ಧ್ವಜ ವಿವಾದ ಕಾಂಗ್ರೆಸ್ ಪಕ್ಷದವರ ವಿರುದ್ಧ ಸ್ಥಳೀಯರು ರೊಚ್ಚಿಗೇಳುವಂತೆ ಮಾಡಿತ್ತು. ನಂತರದಲ್ಲಿ ಸಾಕಷ್ಟು ಕಸರತ್ತು ನಡೆಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆದಿತ್ತಾದರೂ ಪ್ರಯೋಜನವಾಗಿರಲಿಲ್ಲ. ಜೆಡಿಎಸ್-ಬಿಜೆಪಿ ಎರಡೂ ಪಕ್ಷಗಳು ಹನುಮಧ್ವಜ ವಿವಾದಕ್ಕೆ ರಾಜಕೀಯ ಲೇಪನ ಮಾಡಿದ್ದರಿಂದ ಜನರು ಆ ಪಕ್ಷಗಳ ಕಡೆ ಆಕರ್ಷಿತರಾಗಿದ್ದಾರೆಂಬ ಭಾವನೆ ಕಾಂಗ್ರೆಸ್ ಪಕ್ಷದವರಲ್ಲಿ ಮೂಡಿತ್ತು. ವಿವಾದದ ಬೆನ್ನಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೆರಗೋಡಿನಲ್ಲಿ ಅತಿ ಹೆಚ್ಚು ಮುನ್ನಡೆ ದೊರಕಿದ್ದು ಇದನ್ನು ಪುಷ್ಠೀಕರಿಸುವಂತಿತ್ತು.ಹಿಂದುತ್ವ ವಿಚಾರವನ್ನು ಮುಂದಿಟ್ಟುಕೊಂಡು ಜೆಡಿಎಸ್-ಬಿಜೆಪಿ ಗಟ್ಟಿಯಾಗಿ ಕೆರಗೋಡಿನಲ್ಲಿ ಬೇರೂರಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ಕೂಡ ಕೆರಗೋಡಿನಲ್ಲಿ ಹಿಂದುತ್ವದ ಮಂತ್ರ ಜಪಿಸಲಾರಂಭಿಸಿದೆ. ಅದಕ್ಕಾಗಿ ಈಗ ಗಣೇಶನನ್ನು ಮುಂದಿಟ್ಟುಕೊಂಡು ಬಂದಿದೆ. ನಾವೂ ಹಿಂದೂಗಳು, ಹಿಂದೂ ಪರ ಎಂಬ ಭಾವನೆ ಸ್ಥಳೀಯ ಜನರಲ್ಲಿ ಬೇರೂರುವಂತೆ ಮಾಡುವುದು. ಅದ್ಧೂರಿಯಾಗಿ ಗಣೇಶನನ್ನು ವಿಸರ್ಜನೆ ಮಾಡುವ ಮೂಲಕ ಹಿಂದುತ್ವ ಅಲೆ ಎಬ್ಬಿಸಿರುವ ಜೆಡಿಎಸ್-ಬಿಜೆಪಿಯನ್ನು ಅದೇ ಮಂತ್ರದಂಡದಿಂದ ಬಗ್ಗುಬಡಿಯಲು ಕಾಂಗ್ರೆಸ್ ಪ್ಲಾನ್ ಹಾಕಿಕೊಂಡಿದೆ.
ಕೆರಗೋಡಿನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೊಳಿಸಲು ಶಾಸಕ ಪಿ.ರವಿಕುಮಾರ್ ಸಂಕಲ್ಪ ಮಾಡಿದ್ದಾರೆ. ಹನುಮಧ್ವಜ ವಿವಾದದ ಬಳಿಕ ಸ್ಥಳೀಯರನ್ನು ಸೆಳೆಯುವುದಕ್ಕಾಗಿ ನಡೆಸಿದ ಪಂಚಲಿಂಗ ಉತ್ಸವ ಕೂಡ ಫಲ ಕೊಡಲಿಲ್ಲ. ಜೆಡಿಎಸ್-ಬಿಜೆಪಿಯವರಿಗೆ ಸ್ಥಳೀಯ ಜನರಿಂದ ಸಿಗುತ್ತಿರುವಷ್ಟು ಪ್ರಾಶಸ್ತ್ಯ ಕಾಂಗ್ರೆಸ್‌ನವರಿಗೆ ಸಿಗುತ್ತಿಲ್ಲ ಎಂಬ ಬೇಸರವಿದೆ. ಅದನ್ನು ಶಮನ ಮಾಡುವ ಉದ್ದೇಶದಿಂದ ಕಳೆದ ೨೦ ದಿನಗಳ ಹಿಂದೆ ಕೆರಗೋಡಿನಲ್ಲಿ ಪಡುವಲಬಾಗಿಲು ಶ್ರೀ ಗಣೇಶೋತ್ಸವ ಸಮಿತಿಯಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಸೆ.೨೩ರಂದು ಸಹಸ್ರಾರು ಜನರನ್ನು ಸೇರಿಸಿ ಅದ್ಧೂರಿಯಾಗಿ ವಿಸರ್ಜನೆ ಮಾಡುವುದಕ್ಕೆ ಕಾರ್ಯಯೋಜನೆ ರೂಪಿಸುತ್ತಿದ್ದಾರೆ. ಕೆರಗೋಡು ಹೋಬಳಿಯಾದ್ಯಂತ ವಿವಿಧ ಗ್ರಾಮಗಳಿಂದ ಜನರನ್ನು ಕರೆತಂದು ಗಣೇಶ ವಿಸರ್ಜನೆಗೆ ಯತ್ನಾಳ್‌ಗೆ ಸೇರಿಸಿದ್ದಕ್ಕಿಂತಲೂ ಹೆಚ್ಚು ಜನರನ್ನು ಸೇರಿಸಿ ಗಣೇಶನನ್ನು ವಿಸರ್ಜನೆ ಮಾಡುವುದಕ್ಕೆ ಟೊಂಕಕಟ್ಟಿ ನಿಂತಿದೆ.ಅಂದು ನಗರದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸುಮಾರು ೫೦೦ ಬೈಕ್‌ಗಳಲ್ಲಿ ಕೆರಗೋಡು ಗ್ರಾಮದವರೆಗೆ ಬೈಕ್ ರ್ಯಾಲಿ ನಡೆಸುವ ಮುಖಾಂತರ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಗಣೇಶ ವಿಸರ್ಜನೆ ಮಾಡುವುದಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ.
ಹನುಮಧ್ವಜ ವಿವಾದದ ಕಿಡಿ ಎಬ್ಬಿಸಿದ್ದ ಕೆರಗೋಡಿನಲ್ಲಿ ಇದೀಗ ಗಣೇಶ ಕಾಂಗ್ರೆಸ್ ಪಕ್ಷದ ರಾಜಕೀಯ ದಾಳವಾಗಿ ರೂಪಾಂತರಗೊಂಡಿದ್ದಾನೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಂತೆ ಈ ದಾಳಕ್ಕೆ ಜೆಡಿಎಸ್-ಬಿಜೆಪಿ ಪಕ್ಷದವರನ್ನು ಉರುಳಿಸಿ ಪರಾಕ್ರಮ ಮೆರೆಯುವುದು ಕಾಂಗ್ರೆಸ್‌ನ ಕಾರ್ಯತಂತ್ರದ ಭಾಗವಾಗಿದೆ.ಜೆಡಿಎಸ್-ಬಿಜೆಪಿಗೆ ನಮ್ಮ ತಾಕತ್ತು ತೋರಿಸಿ: ಪಿ.ರವಿಕುಮಾರ್ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುತ್ವವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಹಾಗೂ ಜನರನ್ನು ದಿಕ್ಕುತಪ್ಪಿಸುತ್ತಿರುವ ಜೆಡಿಎಸ್ ಮತ್ತು ಬಿಜೆಪಿಗೆ ಕಾಂಗ್ರೆಸ್ ಪಕ್ಷದ ತಾಕತ್ತು ತೋರಿಸುವಂತೆ ಶಾಸಕ ಪಿ.ರವಿಕುಮಾರ್ ಹೇಳಿದರು.ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಕೆರಗೋಡಿನಲ್ಲಿ ಪಡುವಲಬಾಗಿಲು ಗಣೇಶೋತ್ಸವ ಸಮಿತಿಯಿಂದ ಆಯೋಜಿಸಿರುವ ಗಣೇಶ ವಿಸರ್ಜನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಡಿಎಸ್-ಬಿಜೆಪಿಯವರು ಅವರ ಪಕ್ಷದ ನಾಯಕರು ಬಂದ ಸಮಯದಲ್ಲಿ ಅತ್ಯುತ್ಸಾಹವನ್ನು ತೋರುತ್ತಾರೆ. ಕಾಂಗ್ರೆಸ್ ನಾಯಕರು ಬಂದ ಸಮಯದಲ್ಲಿ ನಮ್ಮ ಕಾರ್ಯಕರ್ತರು ಆ ಹುಮ್ಮಸ್ಸನ್ನು ಪ್ರದರ್ಶಿಸುವುದಿಲ್ಲ. ನಮ್ಮಲ್ಲಿ ಆ ಒಗ್ಗಟ್ಟಿನ ಕೊರತೆ ಇದೆ. ನೀವೆಲ್ಲರೂ ಕಾಂಗ್ರೆಸ್ ಅನ್ನು ಬೆಂಬಲಿಸಿದರಷ್ಟೇ ಸಾಲದು. ಜನರೂ ಪಕ್ಷದ ಕಡೆ ಆಕರ್ಷಿತರಾಗುವಂತೆ ಮಾಡಬೇಕು ಎಂದರು.ಇಂದು (ಗುರುವಾರ)ಯಿಂದಲೇ ಆಟೋಗಳಲ್ಲಿ ಪ್ರಚಾರವನ್ನು ನಡೆಸಬೇಕು. ನಗರದ ಶ್ರೀಕಾಳಿಕಾಂಬ ದೇವಾಲಯದಿಂದ ಕೆರಗೋಡು ಗ್ರಾಮದವರೆಗೆ ಬೈಕ್ ಜಾಥಾ ನಡೆಯಲಿದೆ. ಮಹಿಳೆಯರೂ ಕೂಡ ಸ್ಕೂಟರ್‌ಗಳಲ್ಲಿ ಬರಲಿದ್ದಾರೆ. ಅತಿ ಹೆಚ್ಚು ಜನರನ್ನು ಕರೆತರುವುದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಗಣೇಶ ವಿಸರ್ಜನಾ ಕಾರ್ಯಕ್ರಮ ಕೆರಗೋಡಿನಲ್ಲಿ ದಾಖಲೆಯಾಗಿ ಉಳಿಯುವಂತೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಮಾತನಾಡಿ, ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರು ತಮ್ಮ ಮನೆಗಳಿಂದ ಮಹಿಳೆಯರು-ಯುವತಿಯರನ್ನು ಕರೆತರಬೇಕು. ಅವರೂ ನಮ್ಮ ಸ್ಕೂಟರ್ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಹಿಳಾ ಶಕ್ತಿಯನ್ನು ಸಾಬೀತುಪಡಿಸಬೇಕಿದೆ. ಬಿಹಾರ ಚುನಾವಣೆಯಲ್ಲಿ ಮಹಿಳೆಯರು ಶಕ್ತಿ ಪ್ರದರ್ಶಿಸಿದ ಮಾದರಿಯಲ್ಲೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಶಕ್ತಿ ತುಂಬುವಂತೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖಂಡರಾದ ಕೀಲಾರ ರಾಧಾಕೃಷ್ಣ, ರುದ್ರೇಗೌಡ, ಚಿಕ್ಕಬಳ್ಳಿ ಕೃಷ್ಣ, ಪ್ರಶಾಂತ್‌ಬಾಬು ಸೇರಿದಂತೆ ಕೆರಗೋಡಿನ ಮುಖಂಡರಿದ್ದರು.