ಕಾಂಗ್ರೆಸ್‌, ಸಿಜೆಪಿ ಅರಾಜಕತೆ ಸೃಷ್ಟಿ ಹುನ್ನಾರ: ಬೋಪಯ್ಯ

KannadaprabhaNewsNetwork |  
Published : Jul 25, 2026, 02:45 AM IST
ಚಿತ್ರ :  24ಎಂಡಿಕೆ3 : ಮಡಿಕೇರಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆ.  | Kannada Prabha

ಸಾರಾಂಶ

ದೇಶದಲ್ಲಿ ಕಾಂಗ್ರೆಸ್ ಮತ್ತು ಸಿಜೆಪಿ ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿವೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಮಡಿಕೇರಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮಡಿಕೇರಿ: ದೇಶದಲ್ಲಿ ಕಾಂಗ್ರೆಸ್ ಮತ್ತು ಸಿಜೆಪಿ ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿವೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಮಡಿಕೇರಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಸ್ಪೀಕರ್ ಮತ್ತು ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯತೆ ದೃಷ್ಟಿಯಿಂದ ಬದಲಾವಣೆ ಮಾಡಬೇಕೆಂದು ಬಯಸಿದೆ. ಪರಿಣಾಮ ಇಂದು ಹಲವಾರು ಜನಪರ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಪಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಸಿಜೆಪಿ ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಕೆಪಿಎಸ್‌ಸಿ ಪರೀಕ್ಷೆಯನ್ನೂ ಸರಿಯಾಗಿ ನಡೆಸಲಿಲ್ಲ. ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಯಾರೂ ರಾಜೀನಾಮೆ ನೀಡಿಲ್ಲ. ನೀಟ್ ರೀತಿ ನೂರಾರು ಪರೀಕ್ಷೆ ಪತ್ರಿಕೆಗಳು ಸೋರಿಕೆಯಾಗಿವೆ. ಆಗ ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್ ಪರಿಸ್ಥಿತಿಯನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ದುರುಪಯೋಗಪಡಿಸಿಕೊಳ್ಳಲು ಹೊರಟಿದೆ. ದೇಶದ ಭವಿಷ್ಯ ಯುವ ಜನತೆ ಎಂದು ಮೋದಿ ತಿಳಿದಿದ್ದಾರೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ 15-20 ದಿನ ವಿದೇಶದಲ್ಲಿದ್ದರು. ಆಗ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿಲ್ಲ. ಸ್ವದೇಶಕ್ಕೆ ಬಂದ ಕೂಡಲೇ ಅವರಿಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ಭಾರತಕ್ಕೆ ಬಂದ ಕೂಡಲೇ ಹೈ ಸೆಕ್ಯೂರಿಟಿ ಇರುವ ಪ್ರಧಾನಿ ನಿವಾಸದ ಬಳಿ ಧರಣಿ ಮಾಡುತ್ತಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಾರೆ. ಪರಿಣಾಮ ಬಂಧನ ಮಾಡಲಾಗಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಯುವಜನತೆಯ ಭವಿಷ್ಯ ರೂಪಿಸಲು ಮೋದಿ ಅವರು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದನ್ನೆಲ್ಲ ಸಹಿಸದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದೆ ಎಂದು ದೂರಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತ ಪೂವಯ್ಯ, ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಪಕ್ಷದ ಪ್ರದಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಬಿಜೆಪಿ ವಕ್ತಾರ ಅರುಣ್ ಕುಮಾರ್, ತಳೂರು ಕಿಶೋರ್, ಮಾಧ್ಯಮ ಪ್ರಮುಖ ಸಜಿಲ್ ಕೃಷ್ಣನ್, ಪ್ರಮುಖರಾದ ಮನು ಮಂಜುನಾಥ್, ಎಡಕೇರಿ ಪ್ರಸನ್ನ, ಯಮುನಾ ಚಂಗಪ್ಪ, ರವಿಕುಶಾಲಪ್ಪ ಉಪಸ್ಥಿತರಿದ್ದರು.

ಪ್ರತಿಭಟನಾ ನಿರತರು ವಶಕ್ಕೆ: ದೇಶದಲ್ಲಿ ಕಾಂಗ್ರೆಸ್ ಮತ್ತು ಸಿಜೆಪಿ ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಜ್ಜಾಗಿದ್ದ ಪೊಲೀಸ್ ಇಲಾಖೆ ಪ್ರತಿಭಟನಾನಿರತರನ್ನು ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲೇ ವಶಪಡಿಸಿಕೊಂಡರು. ಪೊಲೀಸ್ ವ್ಯಾನ್ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನ್ನು ಬಳಸಿ ಪ್ರತಿಭಟನಾ ನಿರತರನ್ನು ನಗರದ ಮೈತ್ರಿಹಾಲ್‌ಗೆ ಕರೆದೊಯ್ದು ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು, ಮುಖಂಡರ ಮೇಲೆ ದೌರ್ಜನ್ಯ ಖಂಡನೀಯ: ರೈ
ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಯೋಜನೆ ತ್ವರಿತ ಅನುಷ್ಠಾನಗೊಳಿಸಿ: ಫೌಜಿಯಾ ತರನ್ನುಮ್