ಕನ್ನಡಪ್ರಭ ವಾರ್ತೆ, ಯಳಂದೂರು
ಹಿಂದುಳಿದ ವರ್ಗಗಳ ಧ್ವನಿಯನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ವಾಯ್ಸ್ ಆಫ್ ಒಬಿಸಿ ಕಾರ್ಯಕ್ರಮವನ್ನು ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹಮ್ಮಿಕೊಂಡಿದೆ ಎಂದು ಶಿಕ್ಷಣ ಸಚಿವ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೊಳ್ಳೇಗಾಲ, ಯಳಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವತಿಯಿಂದ ಹಮ್ಮಿಕೊಂಡಿದ್ದ ವಾಯ್ಸ್ ಆಫ್ ಒಬಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮ ವರ್ಗಗಳಿಗೂ ಆದ್ಯತೆ ನೀಡುವ ಪಕ್ಷವಾಗಿದೆ. ಹಿಂದುಳಿವ ವರ್ಗಗಳಿಂದ ಅನೇಕರನ್ನು ಮುಖ್ಯಮಂತ್ರಿ ಮಾಡಿದೆ. ರಾಜ್ಯ ಸರ್ಕಾರದಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗಳು ನಡೆಯುತ್ತಿದೆ. ಇದರಲ್ಲಿ ಎಲ್ಲಾ ಜಾತಿ ವರ್ಗಗಳ ಜನರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ಹಾಗಾಗಿ ಇವರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಹಿಂದುಳಿದ ವರ್ಗದವರ ಧ್ವನಿಯಾಗಬೇಕು. ಇವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂಬುದು ನಮ್ಮ ಪಕ್ಷದ ರಾಹುಲ್‌ಗಾಂಧಿ ಕರೆ ನೀಡಿದ್ದಾರೆ. ಹಾಗಾಗಿ ಇವರನ್ನು ಬಲಪಡಿಸಲು ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಜಾತಿ ಸಮೀಕ್ಷೆಗೆ ಬಿಜೆಪಿ ವಿರೋಧಿಸುತ್ತಿದೆ, ಕೊಂಕು ಮಾತನಾಡುತ್ತಿದೆ. ಆದರೆ ಅವರೇ ಈಗ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ನಮ್ಮನ್ನು ಅವರು ನಕಲು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯ ವರದಿ ಬಂದ ನಂತರ ಅರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಸೌಲಭ್ಯಗಳನ್ನು ನೀಡಬೇಕು. ಪರಿಶಿಷ್ಟಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳ ಜನರೇ ಶೇ. ೭೫ ರಷ್ಟಿದ್ದಾರೆ. ಆದರೆ ಒಬಿಸಿಎ ಹೋರಾಟದ ಕೊರತೆ ಇದೆ. ಈ ವರ್ಗದ ೧೨ ಲಕ್ಷ ರೂ. ಒಳಗಿನ ಆದಾಯ ಹೊಂದಿರುವರಿಗೆ ಮಾತ್ರ ಸರ್ಕಾರಿ ಸೌಲಭ್ಯ ಇದೆ. ರಾಜಕೀಯದಲ್ಲಿ ಇವರಿಗೆ ಮೀಸಲಾತಿ ಇಲ್ಲ. ಹಾಗಾಗಿ ಇವರಿಗೂ ಸೌಲಭ್ಯ ನೀಡಲು ಇಂತಹ ಕಾರ್ಯಕ್ರಮ ಅನಿವಾರ್ಯವಾಗಿದೆ ಎಂದರು.ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಅಹಿಂದ ಸಮುದಾಯ ಎಂದಿಗೂ ಕಾಂಗ್ರೆಸ್ ಪರವಾಗಿಯೇ ಇದೆ. ರಾಜ್ಯದಲ್ಲಿ ೫ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ ₹೫೬ ಸಾವಿರ ಕೋಟಿ ವಿನಿಯೋಗ ಮಾಡುತ್ತಿದೆ. ಹಿಂದುಳಿದ ವರ್ಗಗಳ ಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಅಲ್ಲದೆ ಪ್ರತಿ ಜಿಲ್ಲೆಯಲ್ಲೂ ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಎರಡು ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಚಿಂತನೆ ಮಾಡಲಾಗಿದೆ. ಅಲ್ಲದೆ ಹಿಂದುಳಿದ ವರ್ಗಗಳ ೨೦೦ ವಿದ್ಯಾರ್ಥಿನಿಲಯಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ನಮ್ಮ ಕ್ಷೇತ್ರಕ್ಕೆ ೩ ಕೆಪಿಎಸ್‌ಸಿ ಶಾಲೆಯನ್ನು ತೆರೆಯಲು ಶಿಕ್ಷಣ ಸಚಿವರು ಸಮ್ಮತಿಸಿದ್ದಾರೆ. ಹಾಗಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ತಾಲೂಕು ಅಧ್ಯಕ್ಷರಾದ ಕಿನಕಹಳ್ಳಿ ಪ್ರಭುಪ್ರಸಾದ್, ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಪಪಂ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ಶಾಂತಮ್ಮ, ನಗರಸಭಾ ಅಧ್ಯಕ್ಷೆ ರೇಖಾ ರಮೇಶ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಡಗಲಮೋಳೆ ಆರ್. ಚೇತನ್‌ಕುಮಾರ್, ರಾಜ್ಯ ಉಪಾಧ್ಯಕ್ಷ ಮಹದೇವಶೆಟ್ಟಿ, ಕಂದಹಳ್ಳಿ ನಂಜುಂಡಸ್ವಾಮಿ, ಚಂದ್ರಶೇಖರ್, ಭಾಗ್ಯ, ಯೋಗೇಂದ್ರ, ವಿನೋದ್‌ರಾಜ್, ರಮ್ಯ ಸೇರಿದಂತೆ ಅನೇಕರು ಇದ್ದರು.