ಯಲ್ಲಾಪುರ: ಕೇಂದ್ರ ಸರ್ಕಾರ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತು ಬೆಲೆ ಏರಿಕೆ ಮಾಡಿರುವುದನ್ನು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಹಾಲಿನ ದರ ಹೆಚ್ಚಾದರೆ ಬೊಬ್ಬೆ ಹೊಡೆಯುವ ಬಿಜೆಪಿ ರೈತ ವಿರೋಧಿಯಾಗಿದೆ. ಪೆಟ್ರೋಲ್ ದರ, ಗ್ಯಾಸ್ ದರ ಹೆಚ್ಚಳವಾದರೆ ಬಿಜೆಪಿಗರಿಗೆ ಗೊತ್ತೇ ಆಗುವುದಿಲ್ಲ. ಬಿಜೆಪಿಗರು ಅಲ್ಪ ಸಂಖ್ಯಾತ ತುಷ್ಟೀಕರಣ ಎನ್ನುತ್ತಾರೆ. ಬೇರೆ ರಾಜ್ಯದಲ್ಲಿ ಓಲೈಕೆ ಮಾಡಲಿಲ್ಲವೇ? ಅದು ಅವರಿಗೆ ತುಷ್ಟೀಕರಣವಾಗಿ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ರಂಜಾನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮುಸ್ಲಿಮರಿಗೆ ಕೊಡುಗೆ ನೀಡಿದ್ದು, ಬಿಜೆಪಿಗರಿಗೆ ಗೊತ್ತಿಲ್ಲವೇ? ಎಂದು ಕೇಳಿದ ಅವರು, ದೇಶದಲ್ಲಿ ಬೆಲೆ ಏರಿಕೆ ಮಾಡಿದವರೇ ಬಿಜೆಪಿಗರು ಎಂದು ಟೀಕಿಸಿದರು.ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಕಾರಣ. ಬಿಜೆಪಿಗರು ಮಾಡಿದರೆ ಉದ್ಧಾರ, ಆದರೆ ಕಾಂಗ್ರೆಸ್ ಮಾಡಿದರೆ ತುಷ್ಟೀಕರಣ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಸಾಧನೆ ಕೇಳಿಕೊಂಡು ಪಕ್ಷ ಬೆಳೆಸಿ, ಅದು ಬಿಟ್ಟು ಧರ್ಮ, ಧರ್ಮದವರ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಸರಿಯಲ್ಲ ಎಂದರು.
ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ, ಹಾಲುದರ ಏರಿಸಿದ್ದು, ರೈತರಿಗೆ ಇದರಿಂದ ಲಾಭವಾಗಿದೆ ಎಂದು ಸಮರ್ಥಿಸಿಕೊಂಡರು.
ಪಕ್ಷದ ಪ್ರಮುಖರಾದ ಟಿ.ಸಿ. ಗಾಂವ್ಕಾರ, ವಿ.ಎಸ್. ಭಟ್ಟ, ಮುಶರತ್ ಖಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.