ಹಾವೇರಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿ ಖಂಡಿಸಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಕೋರಿ ಜಿಲ್ಲಾ ಕಾಂಗ್ರೆಸ್‌ನಿಂದ ದೀಪ ಬೆಳಗಿ ಮೌನ ಆಚರಿಸಲಾಯಿತು.
ಇಲ್ಲಿಯ ಗಾಂಧಿ ವೃತ್ತದಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಮುಖಂಡರು ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಅರ್ಪಿಸಿದರು. ಜತೆಗೆ, ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿದರು. ಕೃತ್ಯ ಎಸಗಿದ ಉಗ್ರರನ್ನು ಹುಡುಕಿ ತಕ್ಕ ಶಾಸ್ತಿ ನೀಡಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ದೇಶದ ಜನತೆ ನಿಲ್ಲಲಿದೆ. ಇನ್ನು ಮುಂದೆ ಈ ರೀತಿಯ ಕೃತ್ಯ ನಡೆಯಬಾರದು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಮಾಜಿ ಶಾಸಕ ನೆಹರು ಓಲೇಕಾರ, ಪ್ರಭು ಬಿಷ್ಟನಗೌಡ್ರ, ಡಾ. ಸಂಜಯ ಡಾಂಗೆ, ಎಂ.ಎಂ. ಮೈದೂರ, ಪ್ರಸನ್ನ ಹಿರೇಮಠ, ಬಸವರಾಜ ಬಳ್ಳಾರಿ ಇತರರು ಇದ್ದರು.
ಕಾಂಗ್ರೆಸ್ಸಿಗರ ಹೇಳಿಕೆಗೆ ಸಿದ್ದಲಿಂಗಪ್ಪ ಕಮಡೊಳ್ಳಿ ಆಕ್ಷೇಪಹಾನಗಲ್ಲ: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಸೇನಾ ಭದ್ರತಾ ಹಾಗೂ ಗುಪ್ತದಳದ ವೈಫಲ್ಯ ಕಾರಣವೆಂದು ಸಮರ್ಥನೆ ಮಾಡಿಕೊಂಡು, ಉಗ್ರರ ದಾಳಿಗೆ ಹಿಂದುತ್ವವೇ ಕಾರಣ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ದೇಶಪ್ರೇಮವಿಲ್ಲದ ರಾಜಕೀಯ ಪ್ರೇರಿತ ಹೇಳಿಕೆ ಎಂದು ಹಿಂದೂ ಧರ್ಮಧ್ವಜ ಅಭಿಯಾನದ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ ಖಂಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರ ತ್ಯಾಗ, ಪರಾಕ್ರಮಕ್ಕೆ ಕೃತಜ್ಞರಾಗಿರಬೇಕು. ಉಗ್ರರ ಅಟ್ಟಹಾಸಕ್ಕೆ ಸರಿಯಾದ ಪ್ರತಿಕ್ರಿಯೆ ಕೊಡುತ್ತಲೇ ಬಂದಿರುವ ಭಾರತೀಯ ಸೈನ್ಯದ ಬಗ್ಗೆ ಸಂಶಯ ಸಲ್ಲದು. ಆದರೆ ಕಾಂಗ್ರೆಸ್ ನಾಯಕರು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಸೇನಾ ಆತ್ಮವಿಶ್ವಾಸವನ್ನು ಕುಗ್ಗಿಸುವ ಹೇಳಿಕೆ ಕೊಡುತ್ತಿರುವುದನ್ನು ಇಡೀ ದೇಶ ಗಮನಿಸುತ್ತಿದೆ. ಈ ದೇಶ ಸಮರ್ಥ ನಾಯಕರ ಆಡಳಿತದಲ್ಲಿ ಸುಭದ್ರ ದೇಶಕ್ಕಾಗಿ ಬದ್ಧವಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಇಡೀ ತಂಡ ನಿತ್ಯ ನಿರಂತರ ದೇಶದ ಹಿತಕ್ಕಾಗಿ ತೆಗೆದುಕೊಳ್ಳುವ ನಿರ್ಣಯಗಳು ಇಡೀ ದೇಶದ ಜನರ ಬಗೆಗೆ ಇರುವ ಕಾಳಜಿಯಾಗಿದೆ ಎಂದರು.ಉಗ್ರರ ದಾಳಿಗೆ ಹಿಂದುತ್ವವೇ ಕಾರಣ ಎಂದು ಹೇಳುವ ರಾಬರ್ಟ ವಾದ್ರಾ ಹೇಳಿಕೆ ಹಿಂದುಗಳನ್ನು ಕೆರಳಿಸುವ ಹಾಗೂ ಇಸ್ಲಾಂ ಧರ್ಮವನ್ನು ಬೆಂಬಲಿಸುವ ಹೇಳಿಕೆಯಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಸವರಾಜ ಹಾದಿಮನಿ, ರಾಮು ಯಳ್ಳೂರ, ಜಗದೀಶ ಸಿಂಧೂರ ಇದ್ದರು.