ನೆಲ್ಲಮಕ್ಕಡ, ಮಂಡೇಪಂಡ, ಚೇಂದಂಡ, ಕುಪ್ಪಂಡ ಸೆಮೀಸ್‌ಗೆ

KannadaprabhaNewsNetwork | Published : Apr 25, 2025 11:51 PM

ಸಾರಾಂಶ

ಶುಕ್ರವಾರದ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನೆಲ್ಲಮಕ್ಕಡ, ಮಂಡೇಪಂಡ, ಚೇಂದಂಡ ಮತ್ತು ಕುಪ್ಪಂಡ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಇಂದು (ಶನಿವಾರ) ಸೆಮಿಫೈನಲ್‌ ಪಂದ್ಯಗಳು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಉತ್ಸವ ಕುತೂಹಲಕಾರಿ ಘಟ್ಟ ತಲುಪಿದೆ. ಶುಕ್ರವಾರದ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನೆಲ್ಲಮಕ್ಕಡ, ಮಂಡೇಪಂಡ, ಚೇಂದಂಡ ಮತ್ತು ಕುಪ್ಪಂಡ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಇಂದು (ಶನಿವಾರ) ಸೆಮಿಫೈನಲ್‌ ಪಂದ್ಯಗಳು ನಡೆಯಲಿದೆ.

ತೀವ್ರ ಪೈಪೋಟಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 3-1 ಗೋಲುಗಳ ಅಂತರದಿಂದ ಬಲಿಷ್ಠ ಕೂತಂಡ ತಂಡದ ವಿರುದ್ಧ ಗೆಲುವು ಸಾಧಿಸಿತು.ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡದ ವೀಕ್ಷಿತ್ ಸೋಮಯ್ಯ ಒಂದು ಗೋಲು ಗಳಿಸಿದರೆ, ಸಚಿನ್ 2 ಸೊಗಸಾದ ಗೋಲುಗಳನ್ನು ಬಾರಿಸಿ ತಂಡದ ಗೆಲುವನ್ನು ಖಾತರಿ ಪಡಿಸಿದರು. ಎದುರಾಳಿ ಕೂತಂಡ ಪರವಾಗಿ ಸಜನ್ ದೇವಯ್ಯ ಅವರು ಒಂದು ಗೋಲನ್ನಷ್ಟೆ ಗಳಿಸಲು ಶಕ್ತರಾದರು. ಪಂದ್ಯದಲ್ಲಿ ಕೂತಂಡ ಬೋಪಣ್ಣ ಪಂದ್ಯ ಪುರುಷೋತ್ತಮ ಗೌರವವನ್ನು ಪಡೆದುಕೊಂಡರು.ಮಂಡೇಪಂಡ-ಕರವಂಡ ನಡುವಿನ ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಡೇಪಂಡ ತಂಡ 6-0 ಗೋಲುಗಳ ಭಾರಿ ಅಂತರದಿಂದ ಕರವಂಡ ತಂಡವನ್ನು ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟಿತು.ಅತ್ಯಂತ ಯೋಜನಾಬದ್ಧ ಆಟವಾಡಿದ ಮಂಡೇಪಂಡ ತಂಡ, ಒಟ್ಟು ಪಂದ್ಯದ ಮೇಲೆ ಪೂರ್ಣ ಮೇಲುಗೈ ಸಾಧಿಸಿತು. ತಂಡದ ದಿಲನ್ ದೇವಯ್ಯ ಮತ್ತು ಗೌತಮ್ ಗಳಿಸಿದ ತಲಾ ಒಂದು ಗೋಲು ಹಾಗೂ ಚಂಗಪ್ಪ ಮತ್ತು ಸಜನ್ ಅಚ್ಚಯ್ಯ ಗಳಿಸಿದ ತಲಾ 2 ಗೋಲುಗಳ ನೆರವಿನಿಂದ ಸುಲಭ ಗೆಲುವಿನ ನಗು ಬೀರಿತು. ಕರವಂಡ ತಂಡದ ಹುಲನ್ ತಿಮ್ಮಯ್ಯ ಪಂದ್ಯ ಪುರುಷೋತ್ತಮರಾಗಿ ಆಯ್ಕೆಯಾದರು.ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸಿದ ತೃತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ಟೈಬ್ರೇಕರ್ ಮೂಲಕ ಎದುರಾಳಿ ಚೆಪ್ಪುಡಿರ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿ ನಿಟ್ಟುಸಿರು ಬಿಟ್ಟಿತು.ನಿಗದಿತ ಅವಧಿಯ ಆಟದಲ್ಲಿ ಚೇಂದಂಡ ತಂಡದ ನಿಕಿನ್ ತಿಮ್ಮಯ್ಯ 1 ಗೋಲು ಬಾರಿಸಿದರೆ, ಇದಕ್ಕೆ ಪ್ರತಿಯಾಗಿ ಚೆಪ್ಪುಡಿರ ತಂಡದ ಗಗನ್ ತಿಮ್ಮಯ್ಯ 1 ಗೋಲು ಗಳಿಸುವುದರೊಂದಿಗೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ವಿಜೇತ ತಂಡವನ್ನು ನಿರ್ಧರಿಸುವ ಟೈಬ್ರೇಕರ್‌ನಲ್ಲಿ ಚೇಂದಂಡ ವಿಜಯಿಯಾಗಿ ಹೊರಹೊಮ್ಮಿ ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿತು. ಪರಾಜಿತ ತಂಡದ ಚೆಪ್ಪುಡಿರ ನರೇನ್ ಕಾರ್ಯಪ್ಪ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.ಪಂದ್ಯಾವಳಿಯ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕುಪ್ಪಂಡ ತಂಡ 2-1 ಗೋಲುಗಳ ಅಂತರದಿಂದ ಪುದಿಯೊಕ್ಕಡ ತಂಡವನ್ನು ಪರಾಭವಗೊಳಿಸಿತು.ಕುಪ್ಪಂಡ ತಂಡದ ಪರ ಸೋಮಯ್ಯ 2 ಗೋಲು ಸಿಡಿಸಿದರು. ಎದುರಾಳಿ ತಂಡ ಸುಮನ್ ಮುತ್ತಣ್ಣ 1 ಗೋಲು ಗಳಿಸಿತು. ಪುದಿಯೊಕ್ಕಡ ಮತ್ತೊಂದು ಗೋಲಿನ ನಿರೀಕ್ಷೆಯಿಂದ ದಾಳಿಗಳನ್ನು ಸಂಘಟಿಸಿತಾದರೂ ಅದರಲ್ಲಿ ಯಶಸ್ವಿಯಾಗದೆ ವೀರೋಚಿತ ಸೋಲಿಗೆ ತಲೆ ಬಾಗಿತು. ಈ ಪಂದ್ಯದ ಪಂದ್ಯ ಪುರುಷೋತ್ತಮರಾಗಿ ಪುದಿಯೊಕ್ಕಡ ಸುಮನ್ ಮುತ್ತಣ್ಣ ಆಯ್ಕೆಯಾದರು.

Share this article