ಮಡಿಕೇರಿ : ಕಾಂಗ್ರೆಸ್ ಪಕ್ಷ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ, ಸಂವಿಧಾನ, ಸಂಸತ್ತು ಮತ್ತು ಚುನಾವಣಾ ವ್ಯವಸ್ಥೆಯ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆಲ್ಲುವಾಗ ಇವಿಎಂ, ಚುನಾವಣಾ ಆಯೋಗ ಎಲ್ಲವೂ ಸರಿ ಇರುತ್ತದೆ, ಆದರೆ ಸೋತಾಗ ಎಲ್ಲವೂ ಸಮಸ್ಯೆಯಾಗಿ ಬಿಡುತ್ತದೆ. ದೇಶದ ಯಾವುದೇ ಸಂಸ್ಥೆಗಳ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಫಾರಂ ನಂ.7 ವಿಚಾರದಲ್ಲೂ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಫಾರಂ ಸಲ್ಲಿಸುವುದು ಬಿಎಲ್‌ಎಗಳ ಹಕ್ಕು, ಅದನ್ನು ಪರಿಶೀಲಿಸುವುದು ಆಯೋಗದ ಕೆಲಸ. ಮುಸ್ಲಿಂ ಮತದಾರರನ್ನು ತೆಗೆಯಲಾಗುತ್ತಿದೆ ಎಂಬ ಸುಳ್ಳು ಹಬ್ಬಿಸಲಾಗುತ್ತಿದೆ. ಕೊಡಗಿನಲ್ಲಿ ಎಷ್ಟು ಮತದಾರರನ್ನು ಕೈಬಿಡಲಾಗಿದೆ ಎಂದು ಇಲ್ಲಿನ ಶಾಸಕರು ದಾಖಲೆ ಸಹಿತ ತೋರಿಸಲಿ ಎಂದು ಸವಾಲು ಹಾಕಿದರು.
ಎಂಎಲ್‌ಸಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕವೇ ಜನರು ಕಾಂಗ್ರೆಸ್‌ಗೆ ಉತ್ತರ ನೀಡಿದ್ದಾರೆ. 26 ಜಿಲ್ಲೆಗಳ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದೆ. ಸಿಎಂ ಮತ್ತು ಡಿಸಿಎಂ ಓಡಾಡಿದರೂ ಜನರು ಸುಳ್ಳನ್ನು ನಂಬಲಿಲ್ಲ ಎಂದು ಹೇಳಿದರು.ಈ ಅರಾಜಕತೆಯ ವಿರುದ್ಧ ಬಿಜೆಪಿ ದೇಶಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ - ಅರಾಜಕತೆ ತೊಲಗಿಸಿ’ ಆಂದೋಲನ ನಡೆಸಲಿದೆ. ಮುಂದಿನ 20 ದಿನಗಳ ಕಾಲ ಮೈಸೂರು ವಿಭಾಗ ಸೇರಿದಂತೆ ಕೊಡಗಿನಲ್ಲೂ ವಿವಿಧ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದರು.ಗೋಷ್ಠಿಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಇತರರು ಹಾಜರಿದ್ದರು.