ಗೋವಿನಲ್ಲಿ ದೇವರು ನೆಲೆಸಿದ್ದಾರೆ ಎಂಬ ನಂಬಿಕೆ ನಮ್ಮದು. ಈ ಹಿನ್ನೆಲೆಯಲ್ಲಿ ಗೋವಿನ ಪಾಲನೆ, ಗೋಪೂಜೆ ಮಹತ್ವ ಪಡೆದಿದೆ. ಗೋವಿನ ಉಳಿವಿಗಾಗಿ ಶ್ರಮಿಸುತ್ತಿರುವ ಗೋವನಿತಾಶ್ರಯ ಟ್ರಸ್ಟ್‌ನ ರಜತ ಸಂಭ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶರವು ದೇವಸ್ಥಾನ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಹೇಳಿದರು.
ಮಂಗಳೂರು ; ಗೋವಿನಲ್ಲಿ ದೇವರು ನೆಲೆಸಿದ್ದಾರೆ ಎಂಬ ನಂಬಿಕೆ ನಮ್ಮದು. ಈ ಹಿನ್ನೆಲೆಯಲ್ಲಿ ಗೋವಿನ ಪಾಲನೆ, ಗೋಪೂಜೆ ಮಹತ್ವ ಪಡೆದಿದೆ. ಗೋವಿನ ಉಳಿವಿಗಾಗಿ ಶ್ರಮಿಸುತ್ತಿರುವ ಗೋವನಿತಾಶ್ರಯ ಟ್ರಸ್ಟ್‌ನ ರಜತ ಸಂಭ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶರವು ದೇವಸ್ಥಾನ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಹೇಳಿದರು.
ಅವರು ಶುಕ್ರವಾರ ವಿಶ್ವಹಿಂದು ಪರಿಷತ್ ಸಹಯೋಗದ ಸೇವಾ ಸಂಸ್ಥೆ ಗೋವನಿತಾಶ್ರಯ ಟ್ರಸ್ಟ್‌ನ ರಜತ ಸಂಭ್ರಮದ ಕಾರ್ಯಾಲಯ ಹಾಗೂ ಗೋಮಾತೆಗಾಗಿ ಹೊರಕಾಣಿಕೆ ಸಂಗ್ರಹ ಕೇಂದ್ರ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಉದ್ಘಾಟಿಸಿ ಮಾತನಾಡಿದರು.ಗೋವನಿತಾಶ್ರಯ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮಾತನಾಡಿ, ಆರಂಭಿಕ ಹಂತದಲ್ಲಿ ಗೋಶಾಲೆಗೆ ಕದ್ರಿಯ ಬಾಲಕೃಷ್ಣ ಭಟ್ ಅವರು ಜಾಗ ನೀಡಿದ್ದರು. ಬಳಿಕ ಹೆಚ್ಚಿನ ಜಾಗ ಅಗತ್ಯವಿದ್ದ ಕಾರಣ ಫಜೀರಿನಲ್ಲಿ ೧೦ ಎಕರೆ ಜಾಗ ಪಡೆದು ರಾಮಚಂದ್ರಾಪುರ ಮಠದಿಂದ ಒಂದು ಗೋವನ್ನು ಪಡೆದು ಗೋಶಾಲೆ ಆರಂಭಿಸಲಾಗಿತ್ತು. ಕಾರ್ಯಕರ್ತರ ಶ್ರಮ, ದಾನಿಗಳ ಬೆಂಬಲ, ಭಗವಂತನ ದಯೆಯಿಂದ ಗೋಶಾಲೆ ನಡೆಯುತ್ತಿದೆ. ಪ್ರಸ್ತುತ ಬರಗಾಲ ಸ್ಥಿತಿಯಿಂದ ಗೋವುಗಳಿಗೆ ಬೈಹುಲ್ಲು, ಮೇವು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೋಮಾತೆಗಾಗಿ ಹೊರೆಕಾಣಿಕೆ ಆಯೋಜಿಸಲಾಗುತ್ತಿದೆ ಎಂದರು.ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಲೇಡಿಹಿಲ್‌ನ ಮಾಲೀಕ ಎಂ.ರವೀಂದ್ರ ಶೇಟ್ ಮಾತನಾಡಿ, ರಜತ ಸಂಭ್ರಮ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತೇನೆ ಎಂದರು.ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಹಂಪನಕಟ್ಟೆ ಮಾಲೀಕ ಪ್ರಶಾಂತ್ ಶೇಟ್ ಮಾತನಾಡಿ, ಗೋವಿನ ಕೆಲಸ ದೇವರ ಕೆಲಸವಾಗಿದೆ. ಗೋಶಾಲೆ, ಗೋವಿನ ಸಂರಕ್ಷಣೆಗೆ ಎಲ್ಲರೂ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜತೆಗೂಡಿ ಕೆಲಸ ಮಾಡೋಣ ಎಂದರು.ಹಿರಿಯರಾದ ಡಾ.ಪಿ.ಅನಂತಕೃಷ್ಣ ಭಟ್ ಶುಭ ಹಾರೈಸಿದರು. ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಗೋವನಿತಾಶ್ರಯ ಟ್ರಸ್ಟ್‌ನ ಟ್ರಸ್ಟಿ ಹಿತೇಂದ್ರ ಶಾ, ಕಾರ್ಯದರ್ಶಿ ಮನೋಹರ ಸುವರ್ಣ ಇದ್ದರು.
ಶಿವಾನಂದ ಮೆಂಡನ್ ಸ್ವಾಗತಿಸಿ, ನಿರೂಪಿಸಿದರು.
ಶಾಶ್ವತ ನಿಧಿಗೆ ನೆರವಾಗಿ:
ಪಜೀರಿನ ಗೋಶಾಲೆಯಲ್ಲಿ ಗೋವುಗಳನ್ನು ಸಾಕಲು ತಿಂಗಳಿಗೆ ೧೫ ಲಕ್ಷ ರು. ಖರ್ಚಾಗುತ್ತಿದೆ. ವರ್ಷಕ್ಕೆ ೧.೫ ಕೋಟಿ ರು. ಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಜತ ಸಂಭ್ರಮದ ವೇಳೆ ೧.೫ ಕೋಟಿ ರು. ಮೊತ್ತ ಸಂಗ್ರಹಿಸಿ, ಬ್ಯಾಂಕ್‌ನಲ್ಲಿ ಶಾಶ್ವತ ನಿಧಿಯಾಗಿ ಇರಿಸಿ, ಅದರ ಬಡ್ಡಿಯಿಂದ ಗೋಶಾಲೆಯ ನಿರ್ವಹಣೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಗೋಪ್ರೇಮಿಗಳು, ದಾನಿಗಳು ಈ ಕಾರ್ಯಕ್ಕೆ ನೆರವಾಗಬೇಕು ಎಂದು ಗೋವನಿತಾಶ್ರಯ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ವಿನಂತಿಸಿದರು.
ತಲಾ ಒಂದು ಲಕ್ಷ ರು. ಘೋಷಣೆ:ರಜತ ಸಂಭ್ರಮ ಹಿನ್ನೆಲೆಯಲ್ಲಿ ಫಜೀರು ಗೋಶಾಲೆಯ ನಿಧಿಗಾಗಿ ತಲಾ ಒಂದು ಲಕ್ಷ ರು. ನೀಡುವುದಾಗಿ ಶರವು ರಾಘವೇಂದ್ರ ಶಾಸ್ತ್ರಿ ಹಾಗೂ ಡಾ.ಎಂ.ಬಿ.ಪುರಾಣಿಕ್ ಈ ವೇಳೆ ಘೋಷಿಸಿದರು. ಟ್ರಸ್ಟಿ ಹಿತೇಂದ್ರ ಶಾ ಅವರು ೫೦ ಸಾವಿರ ರು. ನೀಡುವುದಾಗಿ ತಿಳಿಸಿದರು.ನ.15, 16ರಂದು ರಜತ ಸಂಭ್ರಮ:ಗೋವನಿತಾಶ್ರಯ ಟ್ರಸ್ಟ್ ರಜತ ಸಂಭ್ರಮ ಹಾಗೂ ಗೋಮಾತೆಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ನ.೧೫ ಹಾಗೂ ೧೬ರಂದು ನಡೆಯಲಿದೆ. ನ.೧೫ರಂದು ಮಧ್ಯಾಹ್ನ ೨.೩೦ಕ್ಕೆ ಕದ್ರಿ ದೇವಸ್ಥಾನದಿಂದ ಪಜೀರು ಗೋಶಾಲೆಗೆ ಗೋಕಾಣಿಕಾ ಮೆರವಣಿಗೆ ಉದ್ಘಾಟನೆಗೊಳ್ಳಲಿದೆ. ಸಂಜೆ ೫ ಗಂಟೆಗೆ ಪಜೀರು ಗೋಶಾಲೆಯಲ್ಲಿ ಸಾರ್ವಜನಿಕ ಗೋಪೂಜೆ, ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ನ. ೧೬ರಂದು ಪಜೀರು ಗೋಶಾಲೆಯಲ್ಲಿ ಬೆಳಗ್ಗೆಯಿಂದ ಚಂಡಿಕಾಯಾಗ, ಮಧ್ಯಾಹ್ನ ೩ ಗಂಟೆಗೆ ಗೋವಿನ ಬಗ್ಗೆ ವಿಚಾರಗೋಷ್ಠಿ, ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.