ಉಳ್ಳಾಲ; ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ವಾಕ್ಚಾತುರ್ಯ, ನೆನಪಿನ ಶಕ್ತಿ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಯಾಗುವುದರ ಜತೆಗೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಕಥಾಸಾರ, ಜೀವನ ಮೌಲ್ಯಗಳು ಮತ್ತು ಜ್ಞಾನ ಅರಿತುಕೊಳ್ಳಲು ಸಾಧ್ಯ. ಯಕ್ಷಗಾನವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಕಲೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ, ಮಕ್ಕಳ ಯಕ್ಷಗಾನವೆಂದರೆ ದೊಡ್ಡವರ ಪ್ರಸಂಗವನ್ನು ಮಕ್ಕಳು ಪ್ರದರ್ಶಿಸುವುದಲ್ಲ.ಪಂಚತಂತ್ರ, ಈಸೋಫನ ಕತೆಗಳು ಮೊದಲಾದ ಮಕ್ಕಳ ಕತೆಗಳೇ ಪ್ರಸಂಗಗಳ ಪ್ರದರ್ಶನ ಬರಬೇಕು ಎಂದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕೃಷ್ಣಪ್ಪ ಕಿನ್ಯ ಉಪಸ್ಥಿತರಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಆಶಯ ನುಡಿಗಳನ್ನಾಡಿದರು.ವಿಟ್ಲ ವಿಶ್ವಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಮನಸ್ವಿ ಆರ್.ಕೆ. ಸ್ವಾಗತಿಸಿದರು. ಬ್ಯಾರೀಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ರಫೀದಾ ಹರೇಕಳ ನಿರೂಪಿಸಿದರು. ವಿಶ್ವಮಂಗಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹಂಶಿತ್ ಆಳ್ವ ವಂದಿಸಿದರು.ಸಮ್ಮೇನದಲ್ಲಿ ‘ಯಕ್ಷಶಿಕ್ಷಣ-ಸವಾಲು ಮತ್ತು ಸಾಧ್ಯತೆಗಳು’ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರು ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷಶಿಕ್ಷಣದ ಸಂಚಾಲಕ ದೀವಿತ್ ಎಸ್. ಕೆ. ಪೆರಾಡಿ ಅವರು ವಿಚಾರ ಮಂಡಿಸಿದರು. ಬಳಿಕ ನಡೆದ ಯಕ್ಷಗಾನ ಕಲೆ: ಅಂದು-ಇಂದು-ಮುಂದು’ ಎಂಬ ವಿಷಯದಲ್ಲಿ ವಿದ್ಯಾರ್ಥಿ ಗೋಷ್ಠಿಯಲ್ಲಿ ಕಾಟಿಪಳ್ಳದ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ಯಕ್ಷಗಾನ ಶಿಕ್ಷಕಿ ಹಾಗೂ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಾದ ಅನನ್ಯಗೌಡ ಕಾವಳಕಟ್ಟೆ, ಆರಾಧ್ಯ ಎ ಭಟ್, ಪ್ರತೀಕ್ಷಾ ಶಂಕರಗೌಡ ಹೊಸೂರು, ಮೇಧಾ ಭಟ್, ವಿರಾಟ್ ಕೃಷ್ಣ, ಹರ್ಷಿತ ಅವರು ಪ್ರಸಂಗ ಸಾಹಿತ್ಯ, ಹಿಮ್ಮೇಳ, ವೇಷಭೂಷಣ, ಅರ್ಥಗಾರಿಕೆ, ಪ್ರದರ್ಶನ ಮತ್ತು ತಾಳಮದ್ದಳೆ ಮೊದಲಾದ ಯಕ್ಷಗಾನದ ವಿವಿಧ ಆಯಾಮಗಳ ಕುರಿತು ಮಾತನಾಡಿದರು.ಸಮ್ಮೇಳನ ವೈಶಿಷ್ಟ್ಯತೆಮಂಗಳೂರು ವಿವಿಯಲ್ಲಿ ನಡೆದ ಮಕ್ಕಳ ಯಕ್ಷಗಾನ ಸಮ್ಮೇಳನದಲ್ಲಿ ಉದ್ಘಾಟನಾ ಕಾರ್ಯಕ್ರಮ, ವಿಚಾರಗೋಷ್ಠಿ, ವಿದ್ಯಾರ್ಥಿಗೋಷ್ಠಿ, ಪ್ರದರ್ಶನಗಳ ನಿರೂಪಣೆ, ನಿರ್ವಹಣೆ, ವಂದನಾರ್ಪನೆಯನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಸಮ್ಮೇಳನದಲ್ಲಿ ಬಣ್ಣದವೇಷದ ರಂಗೋಲಿ, ಯಕ್ಷಗಾನ ಶೈಲಿಯ ದೀಪಾಲಂಕಾರ, ಯಕ್ಷಗಾನ ಸೆಲ್ಫಿ ಸ್ಟಾಂಡ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜೊತೆಯಲ್ಲಿ ಶೈಲೇಶ್ ತೀರ್ಥಹಳ್ಳಿ ತಂಡದ ಪೂರ್ವರಂಗ ಪ್ರದರ್ಶನ ಹಾಗೂ ಆಳ್ವಾಸ್ ತಂಡದಿಂದ ನಡೆದ ನರಶಾರ್ದೂಲ ಪ್ರಸಂಗವು ಸಮ್ಮೇಳನಕ್ಕೆ ಮೆರುಗು ನೀಡಿತು.