ಕೋಲಿ ಸಮಾಜದ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಡಾ.ಜಾಧವ್‌

KannadaprabhaNewsNetwork | Published : Apr 16, 2024 1:03 AM

ಸಾರಾಂಶ

ಕೋಲಿ ಸಮುದಾಯದವರನ್ನು ಎಸ್ ಟಿ ಪಂಗಡಕ್ಕೆ ಸೇರಿಸಲು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಾನು ದಾಖಲೆ ಪತ್ರಗಳ ಸಹಿತ ಚರ್ಚೆ ಮಾಡಿ ವಿಷಯ ಪ್ರಸ್ತಾಪಿಸಿದ ಬಗ್ಗೆ ಪಾರ್ಲಿಮೆಂಟಿನ ಕಡತದಲ್ಲಿ ದಾಖಲಾಗಿದೆ.

ಕನ್ನಡಪ್ರಭ ವರ್ತೆ ಶಹಾಬಾದ್

ಸಂಸತ್ತಿನಲ್ಲಿ ಪರಿಶಿಷ್ಟ ವರ್ಗ ಮೀಸಲಾತಿ ಚರ್ಚೆಯ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಬಗ್ಗೆ ಮಾತನಾಡುವ ಅವಕಾಶವಿದ್ದರೂ ಮಲ್ಲಿಕಾರ್ಜುನ ಖರ್ಗೆಯವರು ಆ ದಿನ ರಾಜ್ಯಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆದದ್ದು ಕೋಲಿ ಸಮಾಜದವರಿಗೆ ಮಾಡಿದ ಮಹಾ ಮೋಸ ಎಂದು ಸಂಸದ ಡಾ. ಉಮೇಶ್ ಜಾಧವ್ ಆರೋಪಿಸಿದ್ದಾರೆ.

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಭಂಕೂರ್ ಮತ್ತು ರಾವೂರ್ ಮಹಾಶಕ್ತಿ ಕೇಂದ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸೋಮವಾರ ಮಾತನಾಡಿ, ಕೋಲಿ ಸಮುದಾಯದವರನ್ನು ಎಸ್ ಟಿ ಪಂಗಡಕ್ಕೆ ಸೇರಿಸಲು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಾನು ದಾಖಲೆ ಪತ್ರಗಳ ಸಹಿತ ಚರ್ಚೆ ಮಾಡಿ ವಿಷಯ ಪ್ರಸ್ತಾಪಿಸಿದ ಬಗ್ಗೆ ಪಾರ್ಲಿಮೆಂಟಿನ ಕಡತದಲ್ಲಿ ದಾಖಲಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಯವರು ಈ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಪಾಲ್ಗೊಳ್ಳದೆ ಬಹಿಷ್ಕಾರ ಹಾಕಿರುವುದರಿಂದ ಕೋಲಿ ಸಮುದಾಯದವರಿಗೆ ನ್ಯಾಯ ಒದಗಿಸುವ ವಿಶೇಷ ಅವಕಾಶವನ್ನು ಕಳೆದುಕೊಂಡರು ಮತ್ತು ಈ ಬಗ್ಗೆ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರು ಖರ್ಗೆಯವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದರು ಎಂದು ಜಾಧವ್ ನೇರವಾಗಿ ಆರೋಪಿಸಿದರು.

ಕೋಲಿ ಸಮಾಜದವರನ್ನು ಎಸ್‌ಟಿ ಪಂಗಡಕ್ಕೆ ಸೇರಿಸಲು ಜಾಧವ್ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವವರು ಕೋಲಿ ಸಮುದಾಯದವರಿಗೆ ಎಸ್‌ಟಿಗೆ ಸೇರಿಸುವ ವಿಚಾರ ಪ್ರಸ್ತಾಪ ಮಾಡಲು ಅವಕಾಶ ಬಳಸದೆ ರಾಜ್ಯಸಭೆಯಿಂದ ಹೊರ ನಡೆದ ಖರ್ಗೆಯವರು ಕೋಲಿ ಸಮುದಾಯಕ್ಕೆ ಉತ್ತರ ನೀಡಬೇಕು ಹೊರತಾಗಿ ಜಾಧವ್ ಏನು ಮಾಡಿದ್ದಾರೆ ಎಂದು ಪದೇ ಪದೇ ಕೇಳುವ ಬದಲು ಪಾರ್ಲಿಮೆಂಟಿನ ಕಡತದಲ್ಲಿ ಎಸ್‌ಟಿಗೆ ಸೇರಿಸಬೇಕೆಂದು ದಾಖಲೆ ಪತ್ರ ಹಾಗೂ ವಿಚಾರ ಮಂಡಿಸಿದ ಬಗ್ಗೆ ನೋಡಿ ತಿಳಿದುಕೊಳ್ಳಲಿ ಎಂದರು.

ಕೋಲಿ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಕೇವಲ ಅನುಕಂಪ ಪಡೆಯಲು ಕಾಂಗ್ರೆಸ್ ಈ ರೀತಿಯ ನಾಟಕ ಮಾಡುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗಿದ್ದು ಆ ಕೆಲಸವನ್ನು ಮಾಡುತ್ತಿದೆ. ಬೆಳಗ್ಗೆ ಎದ್ದ ತಕ್ಷಣ ಮೋದಿ ಕೆಲಸ ಏನು? ಜಾಧವ್ ಕೆಲಸ ಏನು? ಎಂದು ಪ್ರಶ್ನಿಸುವ ಕಾಂಗ್ರೆಸ್ ನವರು 60 ವರ್ಷಗಳಲ್ಲಿ ಮಾಡಿದ ಕೆಲಸದ ಲೆಕ್ಕವನ್ನು ಕೊಡಲಿ. ಬಹಿರಂಗ ಚರ್ಚೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಧಾಕೃಷ್ಣ ದೊಡ್ಡಮನಿ ಎಂದು ಸವಾಲೆಸದರು.

1972 ರಿಂದ ಬರಗಾಲ ಕಾಡಿದ ನಮ್ಮ ಭಾಗದಲ್ಲಿ ಎಂಎಸ್‌ಕೆ ಮಿಲ್, ಶಹಾಬಾದ್‌ ಸಿಮೆಂಟ್ ಕಾರ್ಖಾನೆಗಳು ಮುತ್ತಿವೆ. ವಲಸೆ ಹೆಚ್ಚಿದೆ. ಇದಕ್ಕೆ ಪರಿಹಾರ ರೂಪವಾಗಿ ಪಿಎಂ ಮಿತ್ರ ಜವಳಿ ಪಾರ್ಕ್‌ ಬಂದಿದೆ, ಇದರಿಂದ ಉದ್ಯೋಗಕ್ಕಾಗಿ ವಲಸೆ ಹೋಗುವುದು ತಪ್ಪಲಿದೆ. ₹1575 ಕೋಟಿ ಸೂರತ್ - ಚೆನ್ನೈ ಭಾರತ್ ಮಾಲ್ ರಸ್ತೆ, ₹200 ಕೋಟಿ ವೆಚ್ಚದಲ್ಲಿ ಅಮೃತ ಭಾರತ್ ಸ್ಟೇಷನ್ ಅಭಿವೃದ್ಧಿ ಅಡಿಯಲ್ಲಿ ವಾಡಿ, ಶಹಾಬಾದ, ಕಲಬುರ್ಗಿ ಮತ್ತು ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿ, ₹68 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಗಿಣಾ ನದಿಗೆ ಮಳಖೇಡದಲ್ಲಿ ಸೇತುವೆ, ಹುಮ್ನಾಬಾದ್ ಬೇಸ್ ನಿಂದ ರಾಮ ಮಂದಿರದವರೆಗೆ 58 ಕೋಟಿ ರೂಪಾಯಿ ವೆಚ್ಚದ ಸರ್ವಿಸ್ ರಸ್ತೆ, ನಂದೂರು (ಕೆ) ಕೈಗಾರಿಕಾ ಪ್ರದೇಶದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಗತಿ ಶಕ್ತಿ ಯೋಜನೆಯಲ್ಲಿ ಬಿಪಿಸಿಎಲ್ ಕಂಪೆನಿಯ ಪೆಟ್ರೋಲಿಯಂ ತೈಲಾಗಾರ ಸಂಗ್ರಹ ಮತ್ತು ಅಲ್ಲಿವರೆಗೆ ರೈಲು ಹಳಿ ವಿಸ್ತರಣೆ, ಇಎಸ್ಐ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ, ವಿವಿಧ ಕೋರ್ಸ್ ಗಳ ಆರಂಭ, ದ್ರವೀಕೃತ ಆಮ್ಲಜನಕ ಘಟಕ ಪ್ರಾರಂಭವಾಗಿವೆ ಎಂದು ಅಭಿವೃದ್ಧಿ ಯೋಜನೆಗಳ ಪಟ್ಟಿ ಮಾಡಿದರು.ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡರು ಕಾಂಗ್ರೆಸ್ ನವರಿಗೆ ಮಾತ್ರ ಯಾವುದು ಕಣ್ಣಿಗೆ ಕಾಣುತ್ತಿಲ್ಲ. ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿಸಲು ಮತ್ತು ಎರಡನೇ ಬಾರಿಗೆ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಬಡ್ಡಿ ಸಮೇತ ಜನಸೇವೆ ಮಾಡಲು ಸಿದ್ಧ, ಸನಾತನ ಧರ್ಮದ ರಕ್ಷಣೆ, ದೇಶದ ಸುಂದರ ಭವಿಷ್ಯಕ್ಕಾಗಿ ನಿಮ್ಮ ಓಟಿನ ಶಕ್ತಿ ಮೋದಿಯವರಿಗೆ ಶಕ್ತಿ ತುಂಬುತ್ತದೆ ಎಂದರು.

ಬಿಜೆಪಿ ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಕಾಂಗ್ರೆಸ್ ನವರ ಅನ್ಯಾಯವನ್ನು ತಾಳಿಕೊಂಡು ಚಿತ್ತಾಪುರದಲ್ಲಿ ಸತತವಾಗಿ ಬಿಜೆಪಿಗೆ ಬೆಂಬಲಿಸಿದ್ದೀರಿ. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿ ಮೂರನೇ ಬಾರಿ ಪ್ರಧಾನಿಯವರಿಗೆ ಅವಕಾಶ ನೀಡಬೇಕು ಮತ್ತು ಎರಡನೇ ಬಾರಿ ಜಾದವ್ ಅವರನ್ನು ಸಂಸತ್ತಿಗೆ ಕಳಿಸಿ ಸಚಿವರನ್ನಾಗಿ ನಾವೆಲ್ಲ ಕಾಣಬೇಕು ಎಂದರು.

Share this article