ಬಂಡಾಯಗಾರರಿಗೆ ಬೆಂಬಲಿಸಲು ಕಾಂಗ್ರೆಸ್‌ ನಿರ್ಧಾರ

KannadaprabhaNewsNetwork |  
Published : Sep 19, 2024, 01:47 AM ISTUpdated : Sep 19, 2024, 01:48 AM IST
11.ಬಿಡದಿ ಪುರಸಭೆ | Kannada Prabha

ಸಾರಾಂಶ

ರಾಮನಗರ: ಜೆಡಿಎಸ್ - ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಮಾಗಡಿ ಪುರಸಭೆಯನ್ನು ಕಾಂಗ್ರೆಸ್ ಪಕ್ಷ ಕೈ ವಶ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೆ.19ರಂದು ಗುರುವಾರ ನಡೆಯಲಿರುವ ಬಿಡದಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ರಾಮನಗರ: ಜೆಡಿಎಸ್ - ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಮಾಗಡಿ ಪುರಸಭೆಯನ್ನು ಕಾಂಗ್ರೆಸ್ ಪಕ್ಷ ಕೈ ವಶ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೆ.19ರಂದು ಗುರುವಾರ ನಡೆಯಲಿರುವ ಬಿಡದಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿದ್ದು, ಇದನ್ನೂ ಕೈ ಹಿಡಿತಕ್ಕೆ ತೆಗೆದುಕೊಳ್ಳಲು ಆಡಳಿತರೂಢ ಕಾಂಗ್ರೆಸ್ ರಣತಂತ್ರ ರೂಪಿಸಿದೆ.

ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಷ್ಟು ಸ್ಪಷ್ಟ ಬಹುಮತ ಹೊಂದಿತ್ತು. ಇಲ್ಲಿ 23 ಸದಸ್ಯರ ಪೈಕಿ ಜೆಡಿಎಸ್ 12, ಕಾಂಗ್ರೆಸ್ 10, ಬಿಜೆಪಿ -1 ಸದಸ್ಯರನ್ನು ಹೊಂದಿತ್ತು. ಸಂಸದ ಡಾ.ಸಿ.ಎನ್.ಮಂಜುನಾಥ್ ಮತ ಸೇರಿ ಜೆಡಿಎಸ್ - ಬಿಜೆಪಿ ಮೈತ್ರಿಕೂಟ 13 ಹಾಗೂ ಶಾಸಕ ಬಾಲಕೃಷ್ಣ ಸೇರಿ ಕಾಂಗ್ರೆಸ್ 11 ಸದಸ್ಯ ಬಲ ಹೊಂದಿತ್ತು. ಚುನಾವಣೆಯಲ್ಲಿ ಜೆಡಿಎಸ್‌ನ ನಾಲ್ವರು ಸದಸ್ಯರು ಮತ ಚಲಾಯಿಸದೆ ತಟಸ್ಥರಾದರೆ, ಬಿಜೆಪಿ ಸದಸ್ಯೆ ಗೈರಾಗಿದ್ದರು. ಇದರ ಪರಿಣಾಮ ಕಾಂಗ್ರೆಸ್ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಇಂತಹ ತಂತ್ರವನ್ನು ಬಿಡದಿ ಪುರಸಭೆಯಲ್ಲೂ ಪ್ರಯೋಗಿಸಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ.

ಬಂಡಾಯಗಾರರಿಗೆ ಬೆಂಬಲಿಸಲು ಕೈ ನಿರ್ಧಾರ:

ಬಿಡದಿ ಪುರಸಭೆಯಲ್ಲಿ ಜೆಡಿಎಸ್ - 14 ಹಾಗೂ ಕಾಂಗ್ರೆಸ್ 9 ಸದಸ್ಯರು ಇದ್ದಾರೆ. ಸಂಸದ ಮಂಜುನಾಥ್ ಸೇರಿ ಜೆಡಿಎಸ್ 15, ಶಾಸಕ ಬಾಲಕೃಷ್ಣ ಸೇರಿ ಕಾಂಗ್ರೆಸ್ 10 ಮತ ಬಲವನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಪುರಸಭೆ ಸದಸ್ಯರಾಗಿರುವ 11ನೇ ವಾರ್ಡಿನ ಎಂ.ಎನ್ . ಹರಿಪ್ರಸಾದ್, 20ನೇ ವಾರ್ಡ್ ನ ಯಲ್ಲಮ್ಮ, 22ನೇ ವಾರ್ಡಿನ ಭಾನುಪ್ರಿಯ ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ ನಿಂದ 17ನೇ ವಾರ್ಡಿನ ಸದಸ್ಯ ಶ್ರೀನಿವಾಸ್, 21ನೇ ವಾರ್ಡಿನ ಸದಸ್ಯ ಬಿ.ರಾಮಚಂದ್ರಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ 2ನೇ ವಾರ್ಡಿನ ಸಿ.ಆರ್‌.ಮನು, 3ನೇ ವಾರ್ಡ್ ನ ಸದಸ್ಯೆ ಮಂಜುಳಾ ಗೋವಿಂದಯ್ಯ, 10ನೇ ವಾರ್ಡಿನ ಸದಸ್ಯೆ ಆಯಿಷಾ ಖಲೀಲ್ ಆಕಾಂಕ್ಷಿಗಳಾದರೆ, ಕಾಂಗ್ರೆಸ್‌ನಿಂದ 15ನೇ ವಾರ್ಡಿನ ಬಿಂದಿಯಾ ಮಂಜುನಾಥ್ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್ ನಿಂದ ಯಾರಾದರು ಬಂಡಾಯ ಸಾರಿದರೆ ಅವರಿಗೆ ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ನ 10 ಮತಗಳ ಜೊತೆಗೆ ಬಂಡಾಯಗಾರರು ಒಂದಿಬ್ಬರು ಸದಸ್ಯರನ್ನು ಎಳೆದು ತಂದರೆ ಅಧಿಕಾರವನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.

ಬಿಡದಿ ಪುರಸಭೆ ಅಧಿಕಾರ ಶಾಸಕ ಬಾಲಕೃಷ್ಣ ಮತ್ತು ಮಾಜಿ ಶಾಸಕ ಮಂಜುನಾಥ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ತಲಾ 10 ತಿಂಗಳಂತೆ ಅಧಿಕಾರ ಹಂಚಿಕೆ ಮಾಡಲು ಜೆಡಿಎಸ್ ಉದ್ದೇಶಿಸಿದೆ. ಹಾಗೊಂದು ವೇಳೆ ಜೆಡಿಎಸ್‌ನಲ್ಲಿ ಆಕಾಂಕ್ಷಿತರ ಪೈಕಿ ಯಾರಾದರು ಬಂಡಾಯ ಸಾರಿದರೆ ಅನಿರಿಕ್ಷಿತ ಫಲಿತಾಂಶ ಬರಲಿದೆ.

ಕೋಟ್ ............

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ, ಮಾಗಡಿ ಕ್ಷೇತ್ರದಲ್ಲಿ ಶಾಸಕ ಬಾಲಕೃಷ್ಣ ಇದ್ದಾರೆ. ಮಾಗಡಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅಲ್ಲಿನ ಜೆಡಿಎಸ್ ಪ್ರಜ್ಞಾವಂತ ಸದಸ್ಯರು ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅದೇ ರೀತಿ ಬಿಡದಿ ಪುರಸಭೆಯಲ್ಲಿನ ಜೆಡಿಎಸ್ ಸದಸ್ಯರು ಪ್ರಜ್ಞಾವಂತಿಕೆ ಪ್ರದರ್ಶಿಸುವ ವಿಶ್ವಾಸವಿದೆ. ವರಿಷ್ಠರ ಚುನಾವಣೆಯಲ್ಲಿ ಅಭಿವೃದ್ಧಿ ಪರ ಮತ ಚಲಾಯಿಸುವುದಾಗಿ ಜೆಡಿಎಸ್ ಕೆಲ ಸದಸ್ಯರು ಮಾತುಕೊಟ್ಟಿದ್ದಾರೆ.

- ಸಿ.ಉಮೇಶ್, ಸದಸ್ಯರು, ಬಿಡದಿ ಪುರಸಭೆ

18ಕೆಆರ್ ಎಂಎನ್ 11,12.ಜೆಪಿಜಿ

11.ಬಿಡದಿ ಪುರಸಭೆ

12.ಸಿ.ಉಮೇಶ್

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ