ಆರ್ ಟಿ ಐ ಕಾರ್ಯಕರ್ತ ಸಾವಂತ್ ಸಾವಿನ ತನಿಖೆಗೆ ಕಾಂಗ್ರೆಸ್ ಒತ್ತಾಯ

KannadaprabhaNewsNetwork | Published : Apr 2, 2024 1:08 AM

ಸಾರಾಂಶ

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ‌ ಸಾವಂತ ಆರ್.ಟಿ.ಐ ಕಾರ್ಯಕರ್ತನಾಗಿದ್ದು, ಬಂಟ್ವಾಳದಲ್ಲಿ ನಡೆದ ಅನೇಕ ಅಕ್ರಮ ಹಾಗೂ ಭ್ರಷ್ಟಾಚಾರ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಹಾಗೂ ಅನೇಕ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದ. ಇವರ ಸಾವಿನ ಸುತ್ತ ಅನುಮಾನವಿದೆ ಎಂದು ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ‌ ಸಾವಂತ ಎಂಬವರ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದರೂ ಇದನ್ನು ವಿಮರ್ಶೆ ಮಾಡಿದರೆ ಇದೊಂದು ಕೊಲೆ ಎಂಬ ಸಂಶಯವಿದೆ. ಮುಖದಲ್ಲಿ ಜಜ್ಜಿದ ಗಾಯ, ಮುಖದಲ್ಲಿ ಪರಚಿದ ಗಾಯವಾಗಿದ್ದು ಇದೊಂದು‌ ವ್ಯವಸ್ಥಿತ ಕೊಲೆ ಎಂಬ ಸಂಶಯವಿದೆ ಎಂದು ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಆರೋಪಿಸಿದ್ದಾರೆ.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.ಪದ್ಮನಾಭ ಅವರು ಆರ್.ಟಿ.ಐ ಕಾರ್ಯಕರ್ತನಾಗಿದ್ದು, ಬಂಟ್ವಾಳದಲ್ಲಿ ನಡೆದ ಅನೇಕ ಅಕ್ರಮ ಹಾಗೂ ಭ್ರಷ್ಟಾಚಾರ ಹಾಗೂ ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಟ ಹಾಗೂ ಅನೇಕ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದ. ಪದ್ಮನಾಭ ಸಾವಂತನ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಈತನ ಮೃತದೇಹ ಸಿಕ್ಕಿದ್ದು,ಇದೊಂದು ಕೊಲೆ ಎಂಬ ಸಂಶಯವಿದೆ.

ದೂರು ನೀಡಿದ ಕೂಡಲೇ ಈತನ ಸಾವು ನಡೆದಿದೆ ಎಂದಾದರೆ ಈ ಸಾವಿಗೆ ಕಾರಣವಾದವರನ್ನು ತನಿಖೆ ಮಾಡಬೇಕು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದರ ಸರಿಯಾದ ತನಿಖೆಯನ್ನು ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದರು. ಪೊಲೀಸರು ಕೂಡಲೇ ಕ್ರಮ ಕೈಗೊಂಡು‌ ತನಿಖೆ ಪ್ರಾರಂಭ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡುತ್ತೇವೆ ಎಂದು ತಿಳಿಸಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು.

ಮಾಜಿ ಜಿ.ಪಂ. ಸದಸ್ಯ ಪದ್ಮಶೇಖರ್ ಜೈನ್ , ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಉಪಸ್ಥಿತರಿದ್ದರು.

Share this article