ರಾಹುಲ್‌ ಗಾಂಧಿ ಮೇಲಿನ ಎಫ್‌ಐಆರ್‌ ರದ್ದುಪಡಿಸುವಂತೆ ಕಾಂಗ್ರೆಸ್ ಒತ್ತಾಯ

KannadaprabhaNewsNetwork |  
Published : Sep 02, 2026, 03:15 AM IST
ಹಾವೇರಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ಸುಳ್ಳು ಎಫ್‌ಐಆರ್ ದಾಖಲಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ದುರುದ್ದೇಶಪೂರಿತವಾಗಿ ಸುಳ್ಳು ಎಫ್‌ಐಆರ್ ದಾಖಲಿಸಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ ಮಂಗಳವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾವೇರಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ದುರುದ್ದೇಶಪೂರಿತವಾಗಿ ಸುಳ್ಳು ಎಫ್‌ಐಆರ್ ದಾಖಲಿಸಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ ಮಂಗಳವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಪಾದಯಾತ್ರೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು ಕಾಗಿನೆಲೆ ಕ್ರಾಸ್, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗಿ ಮೈಲಾರ ಮಹದೇವಪ್ಪ ವೃತ್ತ ತಲುಪಿದರು. ಈ ವೇಳೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರನ್ನು ಅವಹೇಳನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ರಾಹುಲ್ ಗಾಂಧಿ ಅವರು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯ ಸೇರಿದಂತೆ ಮೂಲಭೂತ ಹಕ್ಕುಗಳಿವೆ. ಈ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಖಂಡಿಸುತ್ತದೆ. ಜಾತಿವಾದ ಮತ್ತು ಮನುವಾದದ ಹೆಸರಿನಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯಬಾರದು ಎಂದರು.

ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ರಾಹುಲ್ ಗಾಂಧಿ ಅವರ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ನಿರಂತರ ಷಡ್ಯಂತ್ರ ನಡೆಸುತ್ತಿದೆ. ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಬಿಜೆಪಿಗರಿಗೆ ಎಳ್ಳಷ್ಟೂ ನಂಬಿಕೆ ಇಲ್ಲದಂತಾಗಿದೆ. ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ದಲಿತ ಸಮುದಾಯದ ವ್ಯಕ್ತಿ ರಾಮಲೀಲಾ ಮೈದಾನ ಪ್ರವೇಶಿಸಿದ್ದಕ್ಕೆ ಸ್ಥಳವನ್ನು ಶುದ್ಧೀಕರಿಸುವ ಮೂಲಕ ಮನುವಾದಿ ಮನಸ್ಥಿತಿಯನ್ನು ಪ್ರದರ್ಶಿಸಲಾಗಿದೆ. ಇಂತಹ ಅಮಾನವೀಯ ಘಟನೆಗಳನ್ನು ದೇಶದ ಪ್ರತಿಯೊಬ್ಬರೂ ಖಂಡಿಸಬೇಕು ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಬಿಜೆಪಿ ಸರ್ಕಾರದ ನಡೆ ಕುರಿತು ಜನರು ಗಮನಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಮುಂಚೂಣಿ ನಾಯಕರನ್ನು ಹೇಗಾದರೂ ಮಾಡಿ ತಡೆಯಬೇಕು ಎಂಬ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಹಿರೇಮಠ, ಪ್ರಭು ಬಿಷ್ಟನಗೌಡ್ರ, ಗುಡ್ಡನಗೌಡ ಅಂದಾನಿಗೌಡ್ರ, ಮಹಿಳಾ ಅಧ್ಯಕ್ಷೆ ವಸಂತಾ ಬಾಗೂರ, ಎಂ.ಎಂ. ಮೈದೂರ, ಶಂಕರ ಮೆಹರವಾಡೆ, ಜಿಲ್ಲಾ ವಕ್ತಾರ ಡಾ.ಸಂಜಯ ಡಾಂಗೆ, ಮಹದೇವಪ್ಪ ಗಾಜಿಗೌಡ್ರ, ಜಮೀರ್‌ಅಹ್ಮದ್ ಜಿಗರಿ, ಕೃಷ್ಣಪ್ಪ ಕಂಬಳಿ, ಚಂದ್ರಪ್ಪ ಬೇಡರ, ಗುಡ್ಡಪ್ಪ ಜಲದಿ, ಬಸವರಾಜ ಬಳ್ಳಾರಿ, ಶಾಂತಕ್ಕ ಶಿರೂರ, ಮಮತಾ ಜಾಬೀನ, ಶಿಲ್ಪಾ ಬಡೆಮ್ಮನವರ ಇತರರು ಇದ್ದರು.

ರಾಹುಲ್ ಗಾಂಧಿ ಅವರು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ದೇಶದ ಜನರ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಧ್ವನಿಯನ್ನು ಹತ್ತಿಕ್ಕಲು ಸುಳ್ಳು ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವುದು ಸಾಮಾಜಿಕ ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಮಾಡಿದ ಅವಮಾನ. ಕೇಂದ್ರ ಸರ್ಕಾರ ಕೂಡಲೇ ಇಂತಹ ದ್ವೇಷದ ರಾಜಕಾರಣ ಕೈಬಿಡಬೇಕು, ರಾಹುಲ್ ಗಾಂಧಿ ಅವರ ಬಳಿ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದ ಮಾರ್ಗಸೂಚಿಯಂತೆ ಬರ ಘೋಷಣೆ: ಸಿಎಂ
ಕ್ಷೇತ್ರದಲ್ಲಿ 21 ಕೆಪಿಎಸ್ ಶಾಲೆಗಳ ಮಂಜೂರು-ಶಾಸಕ ಪಠಾಣ