ಬಳ್ಳಾರಿ: ಚಲಾವಣೆ ಇಲ್ಲದ ನಾಣ್ಯಗಳಂತಾಗಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನನ್ನನ್ನು ರಾಜಕೀಯವಾಗಿ ಮುಗಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಈ ಎರಡು ರಿಜೆಕ್ಟೆಡ್ ಪೀಸ್‌ಗಳು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮುಲು ಕಥೆ ಮುಗಿಸಿದ ರೆಡ್ಡಿ:ಮನುವಾದಿ ಮನಸ್ಥಿತಿಯ ಜನಾರ್ದನರೆಡ್ಡಿಗೆ ವಾಲ್ಮೀಕಿ ಸಮುದಾಯದವರನ್ನು ಕಂಡರೆ ದ್ವೇಷ, ಅಸೂಯೆ. ಪಕ್ಕದಲ್ಲಿದ್ದವರನ್ನು (ಶ್ರೀರಾಮುಲು) ಈಗಾಗಲೇ ರಾಜಕೀಯವಾಗಿ ಮುಗಿಸಿದ್ದಾನೆ. ಆತನಿಗೆ ಬೇರೆಯವರು ಬೆಳೆಯುವದು ಕಂಡರೆ ಆಗದು. ತಾನೇ ಅಧಿಕಾರದಲ್ಲಿರಬೇಕು. ತಾನೇ ಮೆರೆಯಬೇಕು ಎಂದುಕೊಳ್ಳುತ್ತಾನೆ. ರೆಡ್ಡಿಗೆ ಇಷ್ಟೊಂದು ಕೆಟ್ಟತನ ಯಾಕೆ ಬಂದಿದೆಯೋ ಗೊತ್ತಿಲ್ಲ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ತಾನೇ ನ್ಯಾಯಾಧೀಶನಂತೆ ಮಾತನಾಡುತ್ತಾನೆ. ಈ ಪ್ರಕರಣದಲ್ಲಿ ನನ್ನದು ಯಾವ ತಪ್ಪೂ ಇಲ್ಲ. ಪಕ್ಷಕ್ಕೆ ಮುಜುಗರ ಆಗದಿರಲಿ ಎಂದು ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು ಬಿಜೆಪಿಯವರ ಹೋರಾಟಕ್ಕೆ ಮಣಿದು ರಾಜೀನಾಮೆ ನೀಡಲಿಲ್ಲ. ಮುಖ್ಯಮಂತ್ರಿಗಳು ಸಹ ರಾಜೀನಾಮೆ ನೀಡುವುದು ಬೇಡ ಎಂದಿದ್ದರು. ಆದರೆ, ತಾಯಿಯಂತಿರುವ ಪಕ್ಷಕ್ಕೆ ಮುಜುಗರ ಆಗದಿರಲಿ ಎಂದು ರಾಜೀನಾಮೆಯ ನಿರ್ಧಾರ ಕೈಗೊಂಡೆ ಎಂದರು.
10 ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಎಂದು ಆಹ್ವಾನಿಸಿರುವ ಜನಾರ್ದನ ರೆಡ್ಡಿಯ ಬಲ ಸಂಡೂರಿನ ಉಪ ಚುನಾವಣೆಯಲ್ಲಿ ಎಲ್ಲರಿಗೂ ಗೊತ್ತಾಗಿದೆ. ಸಂಡೂರಿನಲ್ಲಿಯೇ ಮನೆ ಮಾಡಿ ಗಂಟೆ ಬಾರಿಸಿದ ರೆಡ್ಡಿ ತನ್ನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡನೇ? ಬಳ್ಳಾರಿ ನಗರದಲ್ಲಿ ಪತ್ನಿಯನ್ನೇ ಚುನಾವಣೆ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲಾಗಲಿಲ್ಲ. ಇನ್ನೂ 10 ಕ್ಷೇತ್ರದಲ್ಲಿ ಗೆಲುವಿನ ಬಗ್ಗೆ ತಿರುಕನ ಕನಸನ್ನು ಕಾಣುತ್ತಿದ್ದಾನೆ. ಜನಾರ್ದನ ರೆಡ್ಡಿ ತನ್ನ ಸಹೋದರರನ್ನೇ ಬೆಳೆಯಲು ಬಿಟ್ಟಿಲ್ಲ. ರೆಡ್ಡಿ ಅನೇಕ ಬಡ ಕುಟುಂಬಗಳ ಸಮಾಧಿಯ ಮೇಲೆ ಮನೆ ಕಟ್ಟಿದ್ದಾನೆ. ಇಂದಿಗೂ ಆ ಕುಟುಂಬಗಳು ಹಿಡಿಶಾಪ ಹಾಕುತ್ತಿವೆ. ರೆಡ್ಡಿ ಹಿರಣ್ಯಕಶ್ಯಪು ರೀತಿ ಮೊದಲು ಆತ್ಮಶುದ್ಧಿ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರೆಡ್ಡಿ, ರಾಮುಲು ದೊಡ್ಡ ಸುಳ್ಳುಬುರಕರು ಎಂದು ಇಡೀ ಬಳ್ಳಾರಿಗೆ ಗೊತ್ತಿದೆ ಎಂದು ಕಿಡಿಕಾರಿದರು.ಭ್ರಷ್ಟಾಚಾರಿಗಳ ಪಾದಯಾತ್ರೆ:ಬಿಜೆಪಿಯ ಭ್ರಷ್ಟಾಚಾರಿಗಳೆಲ್ಲ ಸೇರಿ ಸುಳ್ಳಿನ ಮೂಟೆ ಹೊತ್ತು ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ಯಶಸ್ವಿಯಾಗುವುದಿಲ್ಲ. ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ. ನನ್ನ ರಾಜಿನಾಮೆಯ ಕ್ರೆಡಿಟ್ ಪಡೆಯಲು ಪ್ರತಿಪಕ್ಷದ ನಾಯಕ ಆರ್. ಅಶೋಕ ಹಾಗೂ ವಿಜಯೇಂದ್ರ ಸ್ಪರ್ಧೆಯಲ್ಲಿದ್ದಾರೆ ಎಂದು ಶಾಸಕ ನಾಗೇಂದ್ರ ಟೀಕಿಸಿದರು.
ಸಂಸದ ಈ. ತುಕಾರಾಂ ಮಾತನಾಡಿ, ಜನಾರ್ದನ ರೆಡ್ಡಿ ಅವರಿಗೆ ಧೈರ್ಯ ಇದ್ದರೆ ಗಂಗಾವತಿಯಲ್ಲಿ ರಾಜಿನಾಮೆ ನೀಡಿ ಗೆದ್ದು ಬರಲಿ. ಅವರು ತಮ್ಮ ಆದಾಯ ಮೂಲ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಶಾಸಕ ಗಣೇಶ್, ಜನಾರ್ದನ ರೆಡ್ಡಿ ಅವರು ಎಸಿ ರೂಮ್, ಕಾರ್‌ನಲ್ಲಿ ಓಡಾಡಿಕೊಂಡು ಚುನಾವಣೆ ಮಾಡಲಿ ಎಂದಾಕ್ಷಣ ಕೇಳಲು ಜನ ದಡ್ಡರಿಲ್ಲ. ಸೊಕ್ಕಿನಿಂದ ಯಾರೂ ಮಾತನಾಡಬಾರದು ಎಂದರು.
ರೆಡ್ಡಿ ಜೈಲಿಗೆ ಹೋಗಿದ್ದು ಯಾಕೆ?: ಕಳೆದ ಒಂದು ವರ್ಷದ ಹಿಂದೆ ರೆಡ್ಡಿ-ಶ್ರೀರಾಮುಲು ಹೇಗಿದ್ದರು ಎಂಬುವುದನ್ನು ಜನ ಮರೆತ್ತಿಲ್ಲ. ಜನಾರ್ದನ ರೆಡ್ಡಿ ಯಾವ ಕಾರಣಕ್ಕೆ ಜೈಲಿಗೆ ಹೋದರು? ಎಂಬುದನ್ನು ಸಹ ಜನ ಮರೆತಿಲ್ಲ. ರೆಡ್ಡಿ ಮಾಡಿರುವ ಹಗರಣದಲ್ಲಿ ಸಹ ಶ್ರೀರಾಮುಲು ಪಾಲಿದೆ. ಆದರೆ, ತನ್ನದ್ಯಾವ ಹಗರಣವಿಲ್ಲ. ತಾನು ಯಾವ ತಪ್ಪೇ ಮಾಡಿಲ್ಲ ಎನ್ನುವಂತೆ ಶ್ರೀರಾಮುಲು ವರ್ತಿಸುತ್ತಿದ್ದಾರೆ ಎಂದು ಶಾಸಕ ನಾಗೇಂದ್ರ ಟೀಕಿಸಿದರು.