ಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೆಂದು ಪರಿಗಣಿಸಲಾದ ತುರ್ತು ಪರಿಸ್ಥಿತಿಯ ದಿನಗಳನ್ನು ಸ್ಮರಿಸುವ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ
ಕುಕನೂರು: ಅಧಿಕಾರದ ಹಪಾಹಪಿಗೆ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿತ್ತು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಯಲಬುರ್ಗಾ ಬಿಜೆಪಿ ಮಂಡಲದಿಂದ ಜರುಗಿದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿಶೇಷ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೆಂದು ಪರಿಗಣಿಸಲಾದ ತುರ್ತು ಪರಿಸ್ಥಿತಿಯ ದಿನಗಳನ್ನು ಸ್ಮರಿಸುವ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಯ ಅತ್ಯಂತ ಖಂಡನೀಯ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ಹಪಾಹಪಿತನದಿಂದ ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ನ್ಯಾಯಾಂಗ ಮತ್ತು ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಮೂಲಕ ದೇಶದ ಜನತೆಯನ್ನು ಬರೋಬ್ಬರಿ 21 ತಿಂಗಳುಗಳ ಕಾಲ ಕತ್ತಲಕೋಣೆಯಲ್ಲಿ ದೂಡಿದರು ಎಂದರು.
ವಿಧಾನ ಪರಿಷತ್ ಶಾಸಕಿ ಹೇಮಲತಾ ನಾಯಕ ಮಾತನಾಡಿ, ಅಧಿಕಾರ ದುರ್ಬಳಕೆಯ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪವಿತ್ರ ಆಶಯ ಕಾಂಗ್ರೆಸ್ ಸಂಪೂರ್ಣವಾಗಿ ಗಾಳಿಗೆ ತೂರಿತು. ಪ್ರಜಾಪ್ರಭುತ್ವದ ಉಳಿವಿಗಾಗಿ ಇಂತಹ ಕರಾಳ ಇತಿಹಾಸ ಇಂದಿನ ಯುವ ಪೀಳಿಗೆ ಹಾಗೂ ಕಾರ್ಯಕರ್ತರು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಮಂಜುನಾಥ ನಾಡಗೌಡರ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಮತ್ತು ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಕಾಂಗ್ರೆಸ್ ಪಕ್ಷವು ಭಾರತೀಯ ಸಂವಿಧಾನದ ತುರ್ತು ನಿಯಮಗಳಾದ ವಿಧಿ 352 ಮತ್ತು ವಿಧಿ 356 ಗಳನ್ನು ಹೇಗೆಲ್ಲ ದುರುಪಯೋಗ ಪಡಿಸಿಕೊಂಡಿತು ಎಂದರು.
ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಹೊಸಮನಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಮ ಬಸವರಾಜ ಗೌರ, ವಿಶ್ವನಾಥ್ ಮರಿಬಸಪ್ಪನವರ್, ಶಂಭು ಜೋಳದ, ಶಿವಲೀಲಾ ದಳವಾಯಿ, ಬಸವಲಿಂಗಪ್ಪ ಭೂತೆ,ವೀರಣ್ಣ ಹುಬ್ಬಳ್ಳಿ, ಬಿಜೆಪಿ ಪಕ್ಷದ ಬಿಎಲ್ಎ 2 ಗಳು, ಕಾರ್ಯಕರ್ತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.