ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಹಾಗೂ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಚಾಮರಾಜ ಕ್ಷೇತ್ರದ ವತಿಯಿಂದ ಈ ಯಾತ್ರೆ ಕೈಗೊಳ್ಳಲಾಗಿದೆ. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಈ ಯಾತ್ರೆ ಹೊರಟಿತು.
ಯಾತ್ರೆಗೆ ಶಾಸಕ ತನ್ವೀರ್‌ಸೇಠ್ ಚಾಲನೆ ನೀಡಿದರು. ಶಾಸಕ ಕೆ. ಹರೀಶ್‌ಗೌಡ ನೇತೃತ್ವದಲ್ಲಿ ಸುಮಾರು 30 ಬಸ್ ಮತ್ತು ಕಾರಿನಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡರು.ಈ ವೇಳೆ ಮಾತನಾಡಿದ ಶಾಸಕ ಕೆ. ಹರೀಶ್‌ಗೌಡ, ನಮ್ಮದು ಬಿಜೆಪಿ, ಜೆಡಿಎಸ್ ರೀತಿ ರಾಜಕೀಯ ಪ್ರೇರಿತ ಯಾತ್ರೆಯಲ್ಲ. ನಾವು ಮಾಡುತ್ತಿರುವುದು ಧರ್ಮ ವಿಜಯ ಯಾತ್ರೆ. ಧರ್ಮಸ್ಥಳ ವಿಚಾರವಾಗಿ ಎಸ್ಐಟಿ ತನಿಖೆ ಮಾಡಿಸಿ ಸತ್ಯ ಹೊರ ಬರುವಂತೆ ಮಾಡಿದ್ದೇವೆ. ಆ ಮೂಲಕ ಶ್ರೀಕ್ಷೇತ್ರದ ಮೇಲೆ ಇದ್ದ ಕಳಂಕ ದೂರ ಮಾಡುವ ಕೆಲಸ ಮಾಡಿದ್ದೇವೆ. ಈಗಾಗಿ ನಮ್ಮದು ನಿಜವಾದ ಧರ್ಮಯಾತ್ರೆ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಎಸ್ಐಟಿ ಸ್ವಾಗತ ಮಾಡಿದವರು, ತನಿಖೆಗೆ ಮುಕ್ತ ಅವಕಾಶ ನೀಡದೆ ಮಧ್ಯ ಪ್ರವೇಶ ಮಾಡಿ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಭಕ್ತರ ಭಾವನೆಯಂತೆ ಮಂಜುನಾಥ ದರ್ಶನಕ್ಕೆ ಹೊರಟಿದ್ದಾರೆ ಎಂದರು.
ಷಡ್ಯಂತರಕ್ಕೆ ವಿದೇಶಿ ಹಣ ಹರಿದು ಬಂದಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ನಾನು ಉತ್ತರ ಕೊಡುವುದಿಲ್ಲ. ಯಾವುದೇ ವಿದೇಶಿ ಹಣ ಬರಬೇಕು ಅಂದರೆ ಕೇಂದ್ರದ ಮೂಲಕವೇ ಬರಬೇಕು. ತನಿಖೆ ವೇಳೆ ಇದೂ ಕೂಡ ತನಿಖೆ ಆಗಲಿ ಎಂದರು.
ಧರ್ಮಸ್ಥಳ ಪ್ರಕರಣದಿಂದ ಮೈಸೂರು ಭಾಗದ ಭಕ್ತಾದಿಗಳ ಭಾವನೆಗೆ ಚ್ಯುತಿ ತಂದಿದೆ. ರಾಜಕೀಯವಾಗಿ ಅನೇಕರು ಅವರ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಎಸ್ಐಟಿ ತನಿಖೆ ಮಾಡಿ ಸತ್ಯ ಹೊರ ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಅವರು ತಿಳಿಸಿದರು.ಎನ್ಐಎ ತನಿಖೆ ಆಗಬೇಕು ಎಂಬ ಒತ್ತಾಯ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದವರು ಬಟ್ಟೆ ಬದಲಿಸಿದಂತೆ ಹೇಳಿಕೆ ನೀಡಿದರೆ ತನಿಖೆ ಮಾಡಲು ಸಾಧ್ಯ ಇಲ್ಲ. ಮೊದಲು ಎಸ್ಐಟಿ ತನಿಖೆ ವರದಿ ಬರಲಿ. ಮುಂದೆ ನೋಡೋಣ. ಮುಸುಕುದಾರಿ ಹಿನ್ನೆಲೆ ತನಿಖೆ ಆಗಬೇಕು. ಆತ ಹೇಳುವ ಹೆಸರುಗಳ ಬಗ್ಗೆ ಕೂಡ ತನಿಖೆ ಆಗಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ಯೋಗೇಶ್, ಅನಂತ ನಾರಾಯಣ, ರಾಮಚಂದ್ರ ಮೊದಲಾದವರು ಇದ್ದರು.