ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿನ ಮೂಲಸೌಕರ್ಯಕ್ಕೆ ತಕ್ಕಂತೆ ರಫ್ತಿನ ಪ್ರಮಾಣವಿಲ್ಲ. ಹೀಗಾಗಿ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ ರಫ್ತಿನ ಪ್ರಮಾಣದಲ್ಲಿ ಏರಿಕೆ ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯಿಂದ ಮಂಗಳವಾರ ಆಯೋಜಿಸಲಾಗಿದ್ದ ಎಫ್‌ಕೆಸಿಸಿಐ 20ನೇ ಆವೃತ್ತಿಯ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಹಲವು ಕೈಗಾರಿಕಾ ಪ್ರದೇಶಗಳಿವೆ. ಅದರಲ್ಲೂ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿಯೇ ಹೆಚ್ಚಿನ ಕೈಗಾರಿಕಾ ಪ್ರದೇಶಗಳಿವೆ. ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲಿಯೇ ಅತಿದೊಡ್ಡದಾಗಿದೆ. ಕೈಗಾರಿಕಾ ಪ್ರದೇಶಗಳಷ್ಟೇ ಅಲ್ಲದೆ ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯವೂ ಸಮರ್ಪಕವಾಗಿದೆ. ಆದರೂ, ನಮ್ಮ ರಾಜ್ಯದ ಕೈಗಾರಿಕಾ ಉತ್ಪಾದನೆಯ ರಫ್ತಿನ ಪ್ರಮಾಣ ₹1,700 ಕೋಟಿಗಳಷ್ಟಿದೆ. ನಮ್ಮಲ್ಲಿನ ಮೂಲಸೌಕರ್ಯಕ್ಕೆ ಹೋಲಿಸಿದರೆ ರಫ್ತಿನ ಪ್ರಮಾಣ ಕಡಿಮೆಯಿದ್ದು, ಕೈಗಾರಿಕೋದ್ಯಮಿಗಳು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ರಫ್ತಿಗೆ ಉತ್ತೇಜಿಸುವಂತಹ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದರು.ಕೈಗಾರಿಕೆಗಳು ಬೆಳೆದರೆ ಉದ್ಯೋಗ ಸೃಷ್ಟಿ ಹೆಚ್ಚುವುದರ ಜತೆಗೆ ರಾಜ್ಯ ಮತ್ತು ದೇಶದ ಆರ್ಥಿಕತೆ ವೃದ್ಧಿಯಾಗುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ 7 ಲಕ್ಷಕ್ಕೂ ಹೆಚ್ಚಿನ ಉದ್ಯೋಗ ನೀಡಲಾಗಿದೆ. ಐಟಿ-ಬಿಟಿ ಕ್ಷೇತ್ರದಿಂದಲೂ ಲಕ್ಷಾಂತರ ಉದ್ಯೋಗ ನೀಡಲಾಗಿದೆ. ಎಲ್ಲ ರೀತಿಯ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾಗುವ ಬೆಂಬಲವನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.
ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮಾತನಾಡಿ, ರಾಜ್ಯ ಮತ್ತು ದೇಶದ ಆರ್ಥಿಕತೆ ವೃದ್ಧಿಗಾಗಿ ಶ್ರಮಿಸುತ್ತಿರುವ ಕೈಗಾರಿಕೋದ್ಯಮಿಗಳಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ರಫ್ತು ಶ್ರೇಷ್ಠತಾ ಪ್ರಶಸ್ತಿ ನೀಡಲಾಗುತ್ತಿದೆ. ರಫ್ತುದಾರರಿಂದಾಗಿ ಕರ್ನಾಟಕದ ಕೈಗಾರಿಕಾ ಕ್ಷೇತ್ರವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ. ರಫ್ತು ಕ್ಷೇತ್ರದಲ್ಲಿ ಕರ್ನಾಟಕ ದೇಶದ ಮೊದಲ 3 ಸ್ಥಾನದಲ್ಲಿದೆ. ಸಾಫ್ಟ್‌ವೇರ್, ಏರೋಸ್ಪೇಸ್, ಯಂತ್ರೋಪಕರಣ, ಬಯೋಟೆಕ್, ಕಾಫಿ, ರೇಷ್ಮೆ ಸೇರಿದಂತೆ ಇನ್ನಿತರ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದನ್ನು ಸಾಧ್ಯವಾಗಿಸಿದ ಉದ್ಯಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.ಕರ್ನಾಟಕವು ವಿಶ್ವ ಮಾರುಕಟ್ಟೆಗೆ ಸಾಂಪ್ರದಾಯಿಕ ಮತ್ತು ಆಧುನಿಕವಾದ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಸ್ಟಾರ್ಟ್‌ಅಪ್‌ಗಳ ಉತ್ಪನ್ನಗಳೂ ರಫ್ತು ಮಾಡಲಾಗುತ್ತಿದೆ. ಇಷ್ಟೆಲ್ಲ ಪ್ರಗತಿ ಸಾಧಿಸುತ್ತಿರುವ ನಡುವೆಯೂ ಸವಾಲುಗಳು ಹೆಚ್ಚುತ್ತಿದೆ. ಅಮೆರಿಕಾದ ಸುಂಕ ಹೇರಿಕೆಯು ಬಹುದೊಡ್ಡ ಸವಾಲಾಗಿದೆ. ಅದನ್ನು ಎದುರಿಸಲು ಕೇಂದ್ರ ಸರ್ಕಾರವು ನಮ್ಮೊಂದಿಗೆ ನಿಲ್ಲಲಿದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ರಫ್ತು ಉದ್ಯಮದಲ್ಲಿರುವವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಫ್ತು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ 40 ಕೈಗಾರಿಕೋದ್ಯಮಿಗಳಿಗೆ ವಿವಿಧ ವಿಭಾಗದಲ್ಲಿ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಫ್‌ಕೆಸಿಸಿಐ ಎಲೈಟ್ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್, ರಫ್ತು ಶ್ರೇಷ್ಠತಾ ಪ್ರಶಸ್ತಿ ಅಧ್ಯಕ್ಷ ತಿಪ್ಪೇಶಪ್ಪ ಇತರರಿದ್ದರು.