ಕನ್ನಡಪ್ರಭ ವಾರ್ತೆ ಆನೇಕಲ್
ಪ್ಯಾರಾ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ತಮಿಳುನಾಡಿನ ಕೊಯಮತ್ತೂರಿನಲ್ಲಿ ಏರ್ಪಡಿಸಿದ್ದ 4ನೇ ರಾಷ್ಟ್ರೀಯ ಪ್ಯಾರಾ ಸಿಟ್ಟಿಂಗ್ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ ಮಹಿಳಾ ತಂಡ 2.0 ಅಂತರದಲ್ಲಿ 3ನೇ ಬಾರಿಯೂ ಗೆದ್ದು ಟ್ರೋಫಿಯನ್ನು ತನ್ನ ಮೂಡಿಗೇರಿಸಿಕೊಂಡಿದೆ.ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 16 ತಂಡಗಳ ಪೈಕಿ ಅಂತಿಮ ಹಂತಕ್ಕೆ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಬಂದಿದ್ದವು. ಜಾರ್ಖಂಡ್ ತಂಡದ ವಿರುದ್ಧ ಜಿದ್ದಾಜಿದ್ದಿ ಪೈಪೋಟಿಯಲ್ಲಿ ಕರ್ನಾಟಕ ತಂಡ ಜಯಭೇರಿ ಬಾರಿಸಿದೆ.
ರಾಜ್ಯ ತಂಡದ ನಾಯಕಿ ಮಂಜುಳಾ ಲಮಾಣಿ ಅವರಿಗೆ ಟೀಮ್ ಇಂಡಿಯಾ ನಾಯಕಿ ಮತ್ತು ರಾಜ್ಯ ತಂಡದ ಪ್ರಧಾನ ಕಾರ್ಯದರ್ಶಿ ರೇಣುಕಾ ಸಾಥ್ ನೀಡಿದರು. ಮಾಲತಿ ಇನಾಮತ್, ಗಂಗವ್ವ, ಪ್ರತಿಭಾ ಅವರ ಸರ್ವಿಸ್ ಗೆಲುವಿನ ಹಾದಿಗೆ ಕೊಂಡೋಯ್ದಿತು. ಮೊದಲ ಸುತ್ತಿನಲ್ಲಿ 23-17 ಅಂತರ ಕಾಯ್ದುಕೊಂಡರೆ ಅಂತಿಮ ಸುತ್ತಿನಲ್ಲಿ 21-16 ಪಾಯಿಂಟ್ಸ್ ಪಡೆದು ಉತ್ತಮ ಪ್ರದರ್ಶನ ನೀಡಿ ಟ್ರೊಫಿಯನ್ನು ಮೂಡಿಗೇರಿಸಿಕೊಂಡು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು. ಇದರೊಂದಿಗೆ 4 ಬಾರಿ ನಡೆದ ರಾಷ್ಟ್ರೀಯ ಪಂದ್ಯದಲ್ಲಿ 3 ಬಾರಿ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ದಾಖಲು ಮಾಡಿದರು.3 ದಿನ ನಡೆದ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಪ್ಯಾರಾ ಥ್ರೋಬಾಲ್ ಫೆಡರೇಶನ್ ಅಧ್ಯಕ್ಷ ಡಾ.ಆಲ್ಬರ್ಟ್ ಪ್ರೇಮ್ ಕುಮಾರ್, ಉಪಾಧ್ಯಕ್ಷ ಆರ್.ಶರಣ್, ರಾಜ್ಯ ತಂಡದ ಕೋಚ್ ಡಿ.ಪಾರ್ಥಿಬನ್, ಪಿಟಿಎಫ್ಐ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಮ್ಯಾನೇಜರ್ ವಿ.ಶ್ರೀನಿವಾಸ್ ಪ್ರಮುಖ ಪಾತ್ರ ವಹಿಸಿದ್ದಾರೆ.ಪಾಲ್ಗೊಂಡ ತಂಡಗಳು: ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಾಂಡಿಚೇರಿ, ಜಮ್ಮು-ಕಾಶ್ಮೀರ, ಬಿಹಾರ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಸೇರಿದಂತೆ ಒಟ್ಟು 16 ರಾಜ್ಯಗಳು ಭಾಗವಹಿಸಿದ್ದವು.