ರೋಗಿಗಳಿಗೂ ಇಸ್ಕಾನ್‌ನಿಂದ ಆಹಾರ ವಿತರಣೆ

KannadaprabhaNewsNetwork |  
Published : Sep 03, 2025, 02:00 AM IST
Dinesh Gundu Rao | Kannada Prabha

ಸಾರಾಂಶ

‘ವಿಶೇಷ ಪೌಷ್ಟಿಕ ಆಹಾರ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸಿ.ವಿ ರಾಮನ್ ನಗರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ‘ವಿಶೇಷ ಪೌಷ್ಟಿಕ ಆಹಾರ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಬೆಂಗಳೂರಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಆಗಲಿದೆ ಎಂದು ಅವರು ತಿಳಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಎಲ್ಲ ರೋಗಿಗಳಿಗೂ ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು ಅಗತ್ಯ ಪೌಷ್ಟಿಕಾಂಶ ಒದಗಿಸುವ ಆಹಾರವನ್ನು ನೀಡುವ ಈ ಯೋಜನೆಯನ್ನು ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗಿದೆ. ಯೋಜನೆಯಡಿ ರೋಗಿಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಸಂಜೆ ಲಘು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ವಿತರಿಸಲಾಗುವುದು.

ರೋಗಿಗಳ ಚೇತರಿಕೆಗೆ ಚಿಕಿತ್ಸೆಯ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಕೂಡ ಮಹತ್ವದ ಪಾತ್ರ ವಹಿಸಲಿದೆ. ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯ ಕೂಡ ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರ ಸೂಕ್ತವಲ್ಲ. ಹೀಗಾಗಿ ಆಹಾರ ಪದ್ಧತಿಯನ್ನು ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಲಾಗಿದೆ ಎಂದು ಹೇಳಿದರು.

ಮೊದಲ ಹಂತದದಲ್ಲಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ, ಜಯನಗರ ಹಾಗೂ ಸಿ.ವಿ. ರಾಮನ್ ನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರವನ್ನು ಪ್ರತಿನಿತ್ಯ ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಜಿಲ್ಲಾಸ್ಪತ್ರೆಗಳಿಗೆ ಪೌಷ್ಟಿಕ ಆಹಾರ ವಿತರಣೆ ಜಾರಿಗೆ ತರುವುದಾಗಿ ಗುಂಡೂರಾವ್ ತಿಳಿಸಿದರು.

ಸಾಮಾನ್ಯ ಆಹಾರ ಕ್ರಮದ ಜೊತೆಗೆ ಚಿಕಿತ್ಸಾ ಆಹಾರ ಕ್ರಮವನ್ನು ರೂಪಿಸಲಾಗಿದೆ. ಗರ್ಭಿಣಿಯರ ಆಹಾರ ಕ್ರಮ, ಬಾಣಂತಿಯರ ಆಹಾರ ಕ್ರಮ ಹಾಗೂ ಮಕ್ಕಳ ಆಹಾರ ಕ್ರಮ ಎಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ಯೋಜನೆಯಡಿ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.

9 ತಿಂಗಳಿಗೆ ₹1.37

ಕೋಟಿ ವೆಚ್ಚ: ಸಚಿವ

ಪ್ರತಿ ಆಸ್ಪತ್ರೆಯಲ್ಲಿ ಸುಮಾರು 250 ರೋಗಿಗಳಿಗೆ ಪ್ರತಿದಿನ ಆಹಾರವನ್ನು ಸರಬರಾಜು ಮಾಡಲು ಇಸ್ಕಾನ್ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 9 ತಿಂಗಳ ಅವಧಿಗೆ ₹1,37,45,700 ವೆಚ್ಚವನ್ನು ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತಿದೆ ಎಂದು ಗುಂಡೂರಾವ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ