ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1885ರಲ್ಲಿ ಎಲ್ಲಾ ರಾಷ್ಟ್ರಭಕ್ತರು ಸೇರಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಅಂತ ಕಾಂಗ್ರೆಸ್‌ಗೆ ಸೇರಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ರಾಷ್ಟ್ರಭಕ್ತರು ಸೇರಿ ಬಲಿದಾನ ಮಾಡಿದರು. ಅಂದು ರಾಷ್ಟ್ರಕ್ಕಾಗಿ ಸ್ಥಾಪಿತವಾದ ಪಕ್ಷ ಇಂದು ಸ್ವಾರ್ಥಕ್ಕಾಗಿ ಸಮಾಧಿಯಾಗಿದೆ. ಸ್ವಾರ್ಥ ಹಾಗೂ ಅಧಿಕಾರಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇಂದಿನ ಕಾಂಗ್ರೆಸ್ ಪಕ್ಷ ಅಧಿಕಾರದ ದಾಹಕ್ಕೆ ಬಹಳ ಕೆಳಗಿಳಿದಿದೆ. ತಾವು ಮಂತ್ರಿಯಾಗಬೇಕು ಅನ್ನೋ ಸ್ವಾರ್ಥ ಬಿಟ್ಟರೇ ಬೇರೆ ಉದ್ದೇಶವಿಲ್ಲ. ಅಷ್ಟರ ಮಟ್ಟಿಗೆ ಕೆಳಗಿಳಿದಿದ್ದಾರೆ. ಸ್ವಾರ್ಥ ಅನ್ನುವುದು ಕಾಂಗ್ರೆಸ್‌ನಲ್ಲಿ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸಚಿವರ ಪ್ರಮಾಣ ವಚನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹೋಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರೇ ಸಿಎಂ ವಿರುದ್ಧ ಧಿಕ್ಕಾರ ಕೂಗ್ತಿದ್ದಾರೆ. ರಾಹುಲ್ ಗಾಂಧಿ ಸಚಿವ ಸ್ಥಾನ ತಪ್ಪಿಸಿದರು ಅಂತ ಬೇಳೂರು ಗೋಪಾಲಕೃಷ್ಣ ನೇರವಾಗಿ ಹೇಳಿದ್ದಾರೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರಗಾಲ ಆವರಿಸಿದೆ. ರಾಜ್ಯದಲ್ಲಿ ರೈತರ ಗೋಳು ಕೇಳುವರಿಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಶಾಸಕರ ಮನೆಗೆ ಸಿಎಂ ಹೋಗ್ತಿದ್ದಾರೆ ಬಡವರ ಮನೆಗಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಅವಧಿಯಲ್ಲೂ ಅಭಿವೃದ್ದಿ ಆಗಲಿಲ್ಲ. ಇಷ್ಟು ದುಸ್ಥಿತಿ ಹಿಂದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿರಲಿಲ್ಲ. ಅತೃಪ್ತ ಶಾಸಕರಿಗೆ ತೃಪ್ತಿ ಪಡಿಸಲು ಸಚಿವ ಸಂಪುಟ ಮತ್ತೊಮ್ಮೆ ಪುನಾರಚನೆ ಮಾಡುತ್ತೆ ಅಂತಾರೆ. ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳೆಯರಿಲ್ಲ. ರಾಜಕೀಯ ಇತಿಹಾಸದಲ್ಲಿ ಮಹಿಳೆಯರಿಲ್ಲದೆ ಸಚಿವ ಸಂಪುಟ ಇದು. ಕಾಂಗ್ರೆಸ್ ಸ್ಥಾಪನೆ ಮಾಡಿದ ನಾಯಕರು ಸ್ವರ್ಗದಲ್ಲಿ ಕಣ್ಣೀರು ಹಾಕ್ತಿದ್ದಾರೆ ಎಂದು ಕುಟುಕಿದರು.
ಭಾರತ ಹಿಂದೂರಾಷ್ಟ್ರ ಆಗಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ರಾಜಕೀಯದಲ್ಲಿ ಅವರಿನ್ನೂ ಬಚ್ಚಾ. ಸಿದ್ದರಾಮಯ್ಯ ಮಟ್ಟಕ್ಕೆ ಹೋಗ್ಬಿಟ್ಟಿದ್ದೇನೆ ಅಂದುಕೊಂಡು ಈ ರೀತಿ ಹೇಳಿದ್ದಾರೆ. ಯಾರೇ ಹೇಳಲಿ ಬಿಡಲಿ ಈ ದೇಶ ಹಿಂದೂರಾಷ್ಟ್ರವೇ ಆಗೋದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬ್ಬರೆ ಅಧಿಕಾರ ನಡೆಸಿದರು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, ಅಧಿಕಾರದ ದಾಹಕ್ಕೆ ಶಾಸಕರು ಬೀದಿಗಿಳಿಯಲಿಲ್ಲ. ಬಿಜೆಪಿ ಆ ಕಾರಣಕ್ಕೆ ನೆಲ ಕಚ್ತು, ಮುಂದೆ ಕಾಂಗ್ರೆಸ್ ಸಹ ನೆಲ ಕಚ್ಚುತ್ತದೆ ಎಂದ ಅವರು, ಬಿಜೆಪಿ ಸುಧಾರಣೆಗೊಂಡ ನಂತರ ಪಕ್ಷ ಸೇರ್ಪಡೆ ಆಗುತ್ತೇನೆ. ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷದಿಂದ ಕರೆ ಬಂದಿತ್ತು. ನನ್ನ ಮಾತೃ ಪಕ್ಷ ಬಿಜೆಪಿ. ಆ ಪಕ್ಷ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ಸೇರಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.