ಡಾ.ಅಂಬೇಡ್ಕರ್ ಹೆಸರನ್ನು ಹೇಳುವ ನೈತಿಕತೆ ಕಾಂಗ್ರೆಸ್ ಗಿಲ್ಲ: ಜಿ.ಡಿ. ಹರೀಶ್‌ಗೌಡ

KannadaprabhaNewsNetwork | Published : Apr 24, 2024 2:19 AM

ಸಾರಾಂಶ

ಮಾತೆತ್ತಿದರೆ ಸಂವಿಧಾನ, ಮೀಸಲಾತಿಯ ಕುರಿತು ಮಾತನಾಡುವ ಕಾಂಗ್ರೆಸಿಗರು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಷಡ್ಯಂತ್ರ ರೂಪಿಸಿ ಸೋಲಿಸಿದರಲ್ಲ ಅದು ಸರಿಯೇ ಅಥವಾ ಸಂವಿಧಾನ ಬದಲಾವಣೆಯಾಗಬೇಕೆಂಬ ವ್ಯಕ್ತಿಗೆ ಬಿಜೆಪಿ ಟಕೆಟ್‌ ನ್ನೇ ನೀಡಲಿಲ್ಲವಲ್ಲ ಅದು ಸರಿನಾ ಎನ್ನುವುದನ್ನು ದಲಿತರು ಯೋಚಿಸಬೇಕು. ಪದೇ ಪದೇ ಸುಳ್ಳನ್ನು ಹೇಳುತ್ತಲೇ ಮುಗ್ಧ ದಲಿತರ ಮತಗಳನ್ನು ಗಳಿಸುವ ಕಾಂಗ್ರೆಸ್‌ ಹುನ್ನಾರ ಈ ಬಾರಿ ವಿಫಲವಾಗಲಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಎರಡು ಬಾರಿ ಷಡ್ಯಂತ್ರದ ಮೂಲಕ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಗೆ ಅಂಬೇಡ್ಕರ್‌ ಅವರ ಹೆಸರನ್ನು ಹೇಳುವ ನೈತಿಕತೆಯು ಇಲ್ಲ ಎಂದು ಶಾಸಕ ಜಿ.ಡಿ. ಹರೀಶ್‌ಗೌಡ ಹೇಳಿದರು.

ಪಟ್ಟಣದ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸಂವಿಧಾನವನ್ನು ಅಂಬೇಡ್ಕರ್ ಮತ್ತೆ ಹುಟ್ಟಿ ಬಂದರೂ ಬದಲಿಸಲಾಗದು ಎಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರೇ ಹೇಳಿದ್ದಾರೆ. ಮಾತೆತ್ತಿದರೆ ಸಂವಿಧಾನ, ಮೀಸಲಾತಿಯ ಕುರಿತು ಮಾತನಾಡುವ ಕಾಂಗ್ರೆಸಿಗರು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಷಡ್ಯಂತ್ರ ರೂಪಿಸಿ ಸೋಲಿಸಿದರಲ್ಲ ಅದು ಸರಿಯೇ ಅಥವಾ ಸಂವಿಧಾನ ಬದಲಾವಣೆಯಾಗಬೇಕೆಂಬ ವ್ಯಕ್ತಿಗೆ ಬಿಜೆಪಿ ಟಕೆಟ್‌ ನ್ನೇ ನೀಡಲಿಲ್ಲವಲ್ಲ ಅದು ಸರಿನಾ ಎನ್ನುವುದನ್ನು ದಲಿತರು ಯೋಚಿಸಬೇಕು. ಪದೇ ಪದೇ ಸುಳ್ಳನ್ನು ಹೇಳುತ್ತಲೇ ಮುಗ್ಧ ದಲಿತರ ಮತಗಳನ್ನು ಗಳಿಸುವ ಕಾಂಗ್ರೆಸ್‌ ಹುನ್ನಾರ ಈ ಬಾರಿ ವಿಫಲವಾಗಲಿದೆ ಎಂದರು.

15 ವರ್ಷಗಳ ಆಡಳಿತದ ಸಾಧನೆಯೇನು?

ತಾಲೂಕಿನಲ್ಲಿ 15 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ದಲಿತರಿಗಾಗಿ ಮಾಡಿದ್ದಾದರೂ ಏನು? 15 ವರ್ಷಗಳಲ್ಲಿ ಎಷ್ಟು ಜನ ದಲಿತರನ್ನು ಜಿಲ್ಲಾಮಟ್ಟದ, ರಾಜ್ಯಮಟ್ಟದ ನಾಯಕರನ್ನಾಗಿ ಮಾಡಿದ್ದೀರಿ? ಅದ್ಯಾಕೆ ನಿಮ್ಮಿಂದ ಆಗಲಿಲ್ಲ? ಮೀಸಲಾತಿಯ ಕುರಿತು ಮಾತನಾಡುವ ನೀವು ಎಷ್ಟು ಮಂದಿ ದಲಿತರನ್ನು ಮೀಸಲಾತಿಯಡಿ ಮುಂದೆ ತಂದಿದ್ದೀರಿ. ನಾನು ಕಳೆದ 11 ತಿಂಗಳಿನಲ್ಲಿ ತಾಲೂಕಿನ ಟಿಎಪಿಸಿಎಂಎಸ್‌ ನ 60 ವರ್ಷಗಳ ಇತಿಹಾಸದಲ್ಲೇ ಮೀಸಲಾತಿಯ ಪ್ರಮೇಯವೇ ಇಲ್ಲದಿದ್ದರೂ ಹಿರಿಯ ದಲಿತ ಮುಖಂಡ ಬಸವಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿಸಿದ್ದೇನೆ. ತಾಲೂಕಿನ ದಲಿತ ಕಾಲೋನಿಗಳ ಸ್ಥಿತಿಗತಿಯೇನು ಬಲ್ಲಿರಾ? ಹುಣಸೂರು ಪಟ್ಟಣ ಸಮೀಪದ ಬಾಚಳ್ಳಿ ರಸ್ತೆಯ ಅಂಬೇಡ್ಕರ್ ಕಾಲೋನಿಯ ದುಸ್ಥಿತಿ ಹೇಗಿದೆ ಗೊತ್ತಾ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಜಿ.ಡಿ. ಹರೀಶ್‌ ಗೌಡ ತಮ್ಮ ಬಾಷಣದುದ್ದಕ್ಕೂ ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಅವರ ಹೆಸರು ಪ್ರಸ್ತಾಪಿಸದೇ ಅವರ ಆಡಳಿತ ವೈಖರಿ ವಿರುದ್ಧ ವಾಗ್ದಾಳಿ ನಡೆಸಿದರು. 15 ವರ್ಷಗಳ ಆಡಳಿತಾವಧಿಯಲ್ಲಿ ಎಷ್ಟು ಬಡಜನರಿಗೆ ಸೈಟ್ ಕೊಟ್ಟಿದ್ದೀರಿ? ಮನೆ ಕೊಟ್ಟಿದ್ದೀರಿ? ದ್ವೇಷ, ಅಸೂಯೆ, ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವುದೇ ಆಯಿತಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಸ್ವಾತಂತ್ರ್ಯಕ್ಕೂ ಮುನ್ನವೇ ದಲಿತರಿಗೆ ಅಕ್ಷರ, ಆರೋಗ್ಯ ಮತ್ತು ಮೀಸಲಾತಿಯನ್ನು ಕಲ್ಪಿಸಿದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಯದುವೀರ್‌ ಅವರಿಗೆ ನಿಮ್ಮೆಲ್ಲರ ಮತ ಮೀಸಲಿರಲಿ ಎಂದರು.

ಸಭೆಯಲ್ಲಿ ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಮುಖಂಡರಾದ ಶಿವಶೇಖರ್, ರಾಜು, ದೇವರಾಜ ಒಡೆಯರ್, ಶಿವಕುಮಾರ್ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಶ್ರೀಧರ್, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ, ಕೆಂಪರಾಜು, ಪ್ರಭಾಕರ್, ಸ್ವಾಮಿ, ದೇವರಾಜ್, ಗಣೇಶ್ ಇದ್ದರು.

Share this article