ಕಾಂಗ್ರೆಸ್‌ನಿಂದ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಒತ್ತು-ನಟರಾಜಗೌಡ

KannadaprabhaNewsNetwork |  
Published : Oct 07, 2026, 02:15 AM IST
ಎ.ಎನ್. ನಟರಾಜ ಗೌಡ | Kannada Prabha

ಸಾರಾಂಶ

ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೊಂದಿದ್ದಾರೆಂದು ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಎ.ಎನ್. ನಟರಾಜಗೌಡ ಹೇಳಿದರು.

ಹಾವೇರಿ: ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು, ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಲ್ಯಾಬ್‌ಗಳನ್ನು ಸ್ಥಾಪಿಸುವುದು ಸೇರಿದಂತೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೊಂದಿದ್ದಾರೆಂದು ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಎ.ಎನ್. ನಟರಾಜಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸುಮಾರು 92 ಸಾವಿರ ಮತದಾರರಿದ್ದು, ಕಳೆದ ಚುನಾವಣೆಯಲ್ಲಿ ಶೇ.12ರಷ್ಟು ಮತಗಳು ಅನರ್ಹಗೊಂಡಿದ್ದವು. ಈ ಬಾರಿ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸುವ ಅಗತ್ಯವಿದೆ ಎಂದರು.

ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ಉತ್ತರ ಕರ್ನಾಟಕಕ್ಕೆ 200 ಕೋಟಿ ರು. ಅನುದಾನ ನೀಡಲಾಗಿದೆ. ಯುವಜನರಿಗೆ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮೋಹನ ಲಿಂಬಿಕಾಯಿ ಅವರು ವಿಶ್ವವಿದ್ಯಾಲಯಗಳಲ್ಲಿ ಎಐ ಟೆಕ್ನಾಲಜಿ ವಿಭಾಗ ಹಾಗೂ ಸ್ಟಾರ್ಟಪ್ ಟೆಕ್ನಾಲಜಿ ವಿಭಾಗಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಪದವೀಧರರ ಭವಿಷ್ಯಕ್ಕೆ ಅಗತ್ಯವಾಗಿರುವ ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ಶಿಕ್ಷಣ ವ್ಯವಸ್ಥೆಯೊಂದಿಗೆ ಜೋಡಿಸುವುದು ಅವರ ಪ್ರಮುಖ ಆದ್ಯತೆಯಾಗಿದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರ ಈಗಾಗಲೇ 72 ಸಾವಿರ ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, `ಬಿಯಾಂಡ್ ಬೆಂಗಳೂರು'''''''' ಯೋಜನೆಯ ಮೂಲಕ ಬೆಂಗಳೂರಿನ ಹೊರಗಿನ ನಗರಗಳಲ್ಲೂ ಉದ್ಯೋಗ ಮತ್ತು ಕೈಗಾರಿಕಾ ಅವಕಾಶಗಳನ್ನು ಹೆಚ್ಚಿಸಲು ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಹಲವು ಮಹತ್ವದ ತೀರ್ಮಾನಗಳಿಗೆ ವಿಧಾನ ಪರಿಷತ್ತಿನಲ್ಲೂ ಬೆಂಬಲ ಅಗತ್ಯವಿದೆ. ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ದೊರೆತರೆ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳು ಹಾಗೂ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಹೀಗಾಗಿ ಮೋಹನ ಲಿಂಬಿಕಾಯಿ ಅವರ ಗೆಲುವು ಮಹತ್ವದ್ದಾಗಿದೆ ಎಂದು ಹೇಳಿದರು.

ಹಾವೇರಿ, ಜಾನಪದ ವಿವಿ ಅಭಿವೃದ್ಧಿಗೆ ಚರ್ಚೆ: ಹಾವೇರಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎರಡೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಕುಬೇರಪ್ಪ ಮನವೊಲಿಸುವ ಪ್ರಯತ್ನ: ಪಕ್ಷದ ಹಿರಿಯ ಮುಖಂಡ ಡಾ.ಆರ್.ಎಂ. ಕುಬೇರಪ್ಪ ಅವರು ಪಶ್ಚಿಮ ಪದವೀಧರ ಘಟಕದ ಚುನಾವಣೆಗೆ ಪಕ್ಷೇತರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಬೇರಪ್ಪ ಅವರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ವಿವಿಧ ಹುದ್ದೆಗಳು ಮತ್ತು ಜವಾಬ್ದಾರಿಗಳಿರುತ್ತವೆ. ಅವರ ಅಸಮಾಧಾನವನ್ನು ನಿವಾರಿಸಿ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ನಟರಾಜ ಗೌಡ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೂರಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ಪರದಾಟ
ಹಾವೇರಿ ತಾಲೂಕಲ್ಲಿ ಬಿರುಗಾಳಿ, ಮಳೆಗೆ ನೆಲಕಚ್ಚಿದ ಕಬ್ಬು, ಮೆಕ್ಕೆಜೋಳ