ಹಾವೇರಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿನ ಲೋಪದೋಷ ಹಾಗೂ ಅಕ್ರಮಗಳನ್ನು ಖಂಡಿಸಿ ಅ.7ರಂದು ನಗರದಲ್ಲಿ `ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ, ದೇಶ ಬಚಾವೋ'' ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.
ಅ.7ರಂದು ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ಪ್ರತಿಕೃತಿ ದಹಿಸಲಾಗುವುದು ಎಂದು ಹೇಳಿದರು.
1.15 ಲಕ್ಷ ಮತದಾರರ ಹೆಸರು ಡಿಲಿಟ್: ಹಾವೇರಿ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಸುಮಾರು 1.15 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅರ್ಹ ಮತದಾರರ ಮತದಾನದ ಹಕ್ಕನ್ನು ರಕ್ಷಿಸುವುದು ಕಾಂಗ್ರೆಸ್‌ನ ಹೋರಾಟವಾಗಿದೆ. ದೇಶದಲ್ಲಿ ಜನಿಸಿದ ಅರ್ಹ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ದೊರೆಯಬೇಕು ಎಂದು ಆಗ್ರಹಿಸಿದರು.ಪದಚ್ಯುತಿಗೊಳಿಸಲು ಆಗ್ರಹ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಬೇಕು ಎಂದು ಒತ್ತಾಯಿಸಿದರು. ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. `ಇವರೆಲ್ಲರೂ ಬಾಂಗ್ಲಾದೇಶದಿಂದ ಬಂದವರೇ..? ಅರ್ಹ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಸರಿಯೇ..? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಗ್ಯಾರಂಟಿ ತಾಲೂಕಾಧ್ಯಕ್ಷ ಎಂ.ಎಂ.ಮೈದೂರ, ಪದವೀಧರ ಘಟಕದ ಅಧ್ಯಕ್ಷ ನಟರಾಜ ಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ವಸಂತಾ ಬಾಗೂರ, ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಶಂಕರ ಮೆಹರವಾಡೆ, ರಾಘವೇಂದ್ರ ಬಾಸೂರ, ನಾಗರಾಜ ಕೊಟಗಿ, ದೇವಿಕಾ ಇದ್ದರು.ಬಿಜೆಪಿಯವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ವಿಚಾರಗಳ ಮೇಲೆ ವಿಶ್ವಾಸವಿಲ್ಲ. 15 ಲಕ್ಷ ರು. ನೀಡುವ ಭರವಸೆ ಈಡೇರಿಸಲಿಲ್ಲ, ಯುವಕರಿಗೆ ಉದ್ಯೋಗ ನೀಡಲಿಲ್ಲ. ಕನಿಷ್ಠ ಮತದಾನದ ಹಕ್ಕನ್ನಾದರೂ ಉಳಿಸಿಕೊಡಿ ಎಂದು ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.