ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಆತಂಕ ಎದುರಾಗಿದೆ
ಬಳ್ಳಾರಿ: ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಹಾಗೂ ಓಟ್ ಚೋರಿ ನಡೆಯುತ್ತಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸೇರಿದಂತೆ ವಿವಿಧ ಮಿತ್ರಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಗಾಂಧಿ ಭವನದಲ್ಲಿ ಸಮಾವೇಶಗೊಂಡು ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿ, ಓಟ್ ಚೋರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೈಯಲ್ಲಿ ಪಕ್ಷಗಳ ಧ್ವಜ, ಮತದಾನದ ಹಕ್ಕು ರಕ್ಷಣೆಗೆ ಸಂಬಂಧಿಸಿದ ಭಿತ್ತಿಪತ್ರ ಹಿಡಿದುಕೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಪ್ರತಿಕೃತಿಯನ್ನು ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ದೇಶದಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ದೂರಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಆತಂಕ ಎದುರಾಗಿದೆ. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಮತದಾರರ ಹಕ್ಕುಗಳನ್ನು ಕಾಪಾಡಬೇಕಾದ ಆಯೋಗ ಈ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು ಎಂದು ಒತ್ತಾಯಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ವಿವಿಧ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿ ಮತ ಕಳವು ನಿಲ್ಲಿಸಿ, ‘ಪ್ರಜಾಪ್ರಭುತ್ವ ಉಳಿಸಿ, ‘ಮತದಾರರ ಹಕ್ಕು ರಕ್ಷಿಸಿ’ಎಂಬ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಸಂಡೂರು ಶಾಸಕಿ ಈ.ಅನ್ನಪೂರ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಸಿಪಿಎಂ ಮುಖಂಡ ವಿ.ಎಸ್.ಶಿವಶಂಕರ್, ಸಿಪಿಐ ಮುಖಂಡ ಆದಿಮೂರ್ತಿ, ಕಾಂಗ್ರೆಸ್ ನಾಯಕರಾದ ಎ.ಮಾನಯ್ಯ ಹಾಗೂ ಮುಂಡ್ರಗಿ ನಾಗರಾಜ್ ಅವರು, ಮತದಾನದ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರ. ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವಾಗ ಚುನಾವಣಾ ಆಯೋಗ ಅತ್ಯಂತ ಎಚ್ಚರಿಕೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ನೆಪದಲ್ಲಿ ಜನರ ಮತದಾನದ ಹಕ್ಕಿಗೆ ಧಕ್ಕೆಯಾಗಬಾರದು ಎಂದು ಆಗ್ರಹಿಸಿದರು.
ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಮೂಡಿರುವ ಅನುಮಾನ ಚುನಾವಣಾ ಆಯೋಗ ನಿವಾರಿಸಬೇಕು. ಮತದಾರರ ಸೇರ್ಪಡೆ ಹಾಗೂ ಕೈಬಿಡುವ ಪ್ರಕ್ರಿಯೆಯ ಸಂಪೂರ್ಣ ವಿವರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ರಾಜಕೀಯ ಪಕ್ಷಗಳು ಎತ್ತಿರುವ ಆಕ್ಷೇಪಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಗಾಂಧಿ ಭವನದಲ್ಲಿ ಸಮಾವೇಶ:
ನಗರದ ಗಾಂಧಿ ಭವನದಲ್ಲಿ ಮೊದಲಿಗೆ ಇಂಡಿಯಾ ಮೈತ್ರಿಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಸಮಾವೇಶ ನಡೆಸಿದರು. ಬಳಿಕ ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗಡಗಿ ಚೆನ್ನಪ್ಪ ವೃತ್ತಕ್ಕೆ ಆಗಮಿಸಿದರು. ಅಲ್ಲಿ ಕೇಂದ್ರ ಚುನಾವಣಾಧಿಕಾರಿಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.
ದೇಶಾದ್ಯಂತ ಓಟ್ ಚೋರಿ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು. ಮತದಾರರ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಬುಡಾ ಅಧ್ಯಕ್ಷ ಜೆ.ಎಸ್.ಆಂಜಿನೇಯಲು, ವಿಜಯಕುಮಾರ್ ಸಂಗನಕಲ್ಲು, ಜಗನ್, ಸಿಪಿಎಂ ಪಕ್ಷದ ಜೆ.ಸತ್ಯಬಾಬು, ಚಂದ್ರಕುಮಾರಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.