ಗಂಭೀರ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ

KannadaprabhaNewsNetwork |  
Published : Oct 07, 2026, 02:15 AM IST
ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿ.ಪಂ.ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಸರ್ಕಾರಿ ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಸಾರ್ವಜನಿಕರಿಗೆ ಚುರುಕಾಗಿ ಸೇವೆ ಒದಗಿಸಲು ಸಾಧ್ಯ.

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ನೌಕರರಲ್ಲಿ ಹೃದಯಾಘಾತ, ರಕ್ತದೊತ್ತಡ ಹಾಗೂ ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಗಂಭೀರ ಕಾಯಿಲೆ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವಂತಾಗಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಹೇಳಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನೌಕರರ ಹಿತದೃಷ್ಟಿಯಿಂದ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಸಾರ್ವಜನಿಕರಿಗೆ ಚುರುಕಾಗಿ ಸೇವೆ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ನೌಕರರ ಆರೋಗ್ಯ ಕಾಪಾಡುವುದೇ ಪ್ರಮುಖ ಧ್ಯೇಯವಾಗಿದೆ. ಪ್ರತಿಯೊಬ್ಬ ನೌಕರನು ತನ್ನ ಕುಟುಂಬದ ಮುಖ್ಯ ಆಧಾರ ಸ್ತಂಭವಾಗಿರುತ್ತಾನೆ. ಕರ್ತವ್ಯದ ಒತ್ತಡದಲ್ಲಿ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆಯದಿದ್ದರೆ ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗಾಗಿ ನೌಕರರ ಕಲ್ಯಾಣವೇ ಈ ಆರೋಗ್ಯ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಆರೋಗ್ಯ ಶಿಬಿರದ ಜತೆಗೆ ಪಿಡಿಒ ಸಂಘದಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸಂಗ್ರಹವಾದ ರಕ್ತ ನೇರವಾಗಿ ಜಿಲ್ಲಾಸ್ಪತ್ರೆ ಅಥವಾ ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಶಿಬಿರದಲ್ಲಿ ಒಟ್ಟು 17 ಪ್ರತ್ಯೇಕ ತಪಾಸಣಾ ಕೌಂಟರ್‌ ಸ್ಥಾಪಿಸಲಾಗಿತ್ತು. ಮನೋವೈದ್ಯಕೀಯ, ಚರ್ಮರೋಗ, ಇಸಿಜಿ, ಎಕ್ಸ್-ರೇ, ಕ್ಷಯರೋಗ ತಪಾಸಣೆ ಸೇರಿದಂತೆ ತಲೆಯಿಂದ ಕಾಲಿನವರೆಗಿನ ಸಂಪೂರ್ಣ ದೈಹಿಕ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಇದಕ್ಕೂ ಮುನ್ನ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು, ವಿವಿಧ ತಪಾಸಣಾ ಕೌಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವ್ಯವಸ್ಥೆಗಳನ್ನು ಖುದ್ದಾಗಿ ವೀಕ್ಷಿಸಿದ ಅವರು, ಅಧಿಕಾರಿ-ಸಿಬ್ಬಂದಿಗೆ ಮಾದರಿಯಾಗುವಂತೆ ಸ್ವತಃ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶ ಪರೀಕ್ಷೆ ಸೇರಿದಂತೆ ಪ್ರಾಥಮಿಕ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬಳಿಕ ಸಿಬ್ಬಂದಿಯಿಂದ ಮಾಹಿತಿ ಪಡೆದು ಯಾವುದೇ ತೊಂದರೆಯಾಗದಂತೆ ಉತ್ತಮ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಡಿಎಚ್‌ಒ ಡಾ. ಆಲಕಾನಂದ ಡಿ ಮಳಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ವಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಜಿಪಂ ಅಧಿಕಾರಿ-ಸಿಬ್ಬಂದಿ ಹಾಗೂ ಆರೋಗ್ಯ, ಆಯುಷ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೂರಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ಪರದಾಟ
ಹಾವೇರಿ ತಾಲೂಕಲ್ಲಿ ಬಿರುಗಾಳಿ, ಮಳೆಗೆ ನೆಲಕಚ್ಚಿದ ಕಬ್ಬು, ಮೆಕ್ಕೆಜೋಳ