ಕನ್ನಡಪ್ರಭ ವಾರ್ತೆ ಹಿರಿಯೂರು
ಶಿಕ್ಷಕರಿಗೆ ಸುಳ್ಳಿನ ಚಾಕೊಲೇಟ್ ತಿನ್ನಿಸಿ ಕಾಂಗ್ರೆಸನ್‌ವರು ಮತ ಪಡೆದಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು 7ನೇ ವೇತನ ಆಯೋಗ ಜಾರಿ ಮಾಡುವ ಆಸೆ ಹುಟ್ಟಿಸಿ ಶಿಕ್ಷಕರನ್ನು ನಂಬಿಸಿದರು. ಅವರ ಮಾತನ್ನು ನಂಬಿ ಶಿಕ್ಷಕರು ಕಾಂಗ್ರೆಸ್ ಪರ ಒಲವು ತೋರಿದರು.7ನೇ ವೇತನ ಆಯೋಗದ ಅನುಷ್ಠಾನ ಎಲ್ಲಿಗೆ ಬಂತು ಎಂದು ಕೇಳುವ ಮತ್ತು ಶಿಕ್ಷಕರು ಕಂಡ ಕಂಡ ಶಾಸಕರ ಬೆನ್ನತ್ತಿ ಜಾರಿಯ ಬಗ್ಗೆ ಒತ್ತಾಯಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಿಎಂ ಸಿದ್ದರಾಮಯ್ಯನವರು ಶಿಕ್ಷಕ, ಉಪನ್ಯಾಸಕರಿಗೆ ಮೋಸ ಮಾಡಿದ್ದು ಯಾಕೆ ಎಂದು ಉತ್ತರಿಸಬೇಕು. ಸರ್ಕಾರದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಗುಂಡಿ ಬಿದ್ದ ರಸ್ತೆಗೆ ಒಂದು ಹಿಡಿ ಮಣ್ಣು ಹಾಕಿಸಲಾಗಿಲ್ಲ. ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಿದ್ದಿಲ್ಲ. 6ತಿಂಗಳಲ್ಲಿ ಓಪಿಎಸ್ ತರ್ತೀವಿ ಎಂದು ಹೇಳಿ ಮೋಸ ಮಾಡಲಾಗಿದೆ. ಸರ್ಕಾರದ ಮಾತಿಗೆ ಮಾನ ಮರ್ಯಾದೆ ಇಲ್ಲದಂತಾಗಿದೆ. ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೇಳಿಕೊಂಡರೆ ಸಾಲದು. ಅದನ್ನು ಸಾಬೀತು ಮಾಡಬೇಕು ಎಂದರು.ಎನ್‌ಪಿಎಸ್ ತೆಗೆದು ಮೊದಲು ಒಪಿಎಸ್ ಜಾರಿ ಮಾಡಿ. ₹80 ಲಕ್ಷ್ಮ ಬೆಲೆಯ ವಾಚ್ ಕಟ್ಟಿದಾಗ ನಾವೇ ಇವರು ಸಮಾಜವಾದಿಗಳಲ್ಲ, ಮಜಾವಾದಿಗಳು ಎಂದು ಪ್ರತಿಭಟಿಸಿದ್ದೆವು. ಇದೀಗ ಅವರ ನಡವಳಿಕೆ ಬದಲಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಾಲ್ಮೀಕಿ ಹಗರಣ ಕಣ್ಣ ಮುಂದಿದ್ದು, 187 ಕೋಟಿ ಹಣ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಹಣ ದುರ್ಬಳಕೆ ಆಗಿದೆ. ಅಷ್ಟು ದೊಡ್ಡ ಮೊತ್ತ ಬಿಡುಗಡೆ ಆಗಬೇಕಾದರೆ ಆರ್ಥಿಕ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ಇರುತ್ತದೆಯಾ? ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.
ಮುಖ್ಯಮಂತ್ರಿಗಳನ್ನು ಪ್ರಾಮಾಣಿಕ ಎಂದು ಜನ ಹೇಳುತ್ತಾರೆ. ಅವರು ಪ್ರಾಮಾಣಿಕರೇ ಆಗಿದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಆಮೇಲೆ ಬೇಕಾದರೆ ಸೀತಾಮಾತೆಯ ರೀತಿ ಅಗ್ನಿಪರೀಕ್ಷೆ ಎದುರಿಸಿ ಸಮಾಜವಾದಿಯಾಗಿ ಹೊರಬರಲಿ. ನಮಗೆ ಸೈಟ್ ಬೇಡ ದುಡ್ಡು ಕೊಡಿ ಎಂಬ ಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅವರೀಗ ಧನದಾಹಿ ಆಗಿದ್ದಾರೆ. ಹಗರಣಗಳ ಬಗ್ಗೆ ಪ್ರತಿಭಟನೆ ಮಾಡಲು ಹೋದರೆ ಹೋರಾಟವನ್ನೇ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ನಾವು ಜನರ ಧ್ವನಿಯಾಗಿ ಹೋರಾಟ ಮಾಡುತ್ತೇವೆ. ಪ್ರಾಮಾಣಿಕರು ಹೋರಾಟ ತಡೆಯುವ ಬದಲು ತನಿಖೆ ಎದುರಿಸಲಿ. ಈ ರೀತಿಯ ದಮನಕಾರಿ ನೀತಿಯನ್ನು ನಾವು ಸಹಿಸುವುದಿಲ್ಲ ಎಂದರು.ಎಲ್ಲಾ ಪಕ್ಷಗಳಲ್ಲೂ ಎಸ್‌ಟಿ ಸಮುದಾಯದ ಶಾಸಕರಿದ್ದಾರೆ. ಆದರೆ ಯಾಕೆ ಯಾರು ಈ ಹಣ ದುರುಪಯೋಗದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಎಸ್‌ಟಿ ಸಂಘಟನೆಗಳು ತಮ್ಮದೇ ಸಮುದಾಯದ ಹಣ ಪೋಲಾದರೂ ಪ್ರಶ್ನೆ ಮಾಡುತ್ತಿಲ್ಲವೇಕೆ? ಕಾಂಗ್ರೆಸ್ ಸರ್ಕಾರ ಸುಳ್ಳುಗಳ ಮೇಲೆ ಅಧಿಕಾರ ಹಿಡಿದು ಭ್ರಷ್ಟಾಚಾರದ ಆಡಳಿತ ನಡೆಸುತ್ತಿದೆ ಎಂದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಕೆಆರ್ ಹಳ್ಳಿ ಶಿವಣ್ಣ ಮುಂತಾದವರಿದ್ದರು.