ಮಾನವೀಯತೆಯ ಉಳಿವಿಗಾಗಿ ಕಾಂಗ್ರೆಸ್ ಹೋರಾಟ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Dec 24, 2024 12:49 AM

ಸಾರಾಂಶ

ಡಿ. 27ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಹಾನಗಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಹಾನಗಲ್ಲ: ಮಾನವೀಯತೆಯ ಉಳಿವಿಗಾಗಿ ಕಾಂಗ್ರೆಸ್ ಹೋರಾಡುತ್ತಿದ್ದರೆ ಬಿಜೆಪಿ ದ್ವೇಷ ಹರಡಿ, ಭಾವನೆ ಕೆರಳಿಸಿ ರಾಜಕೀಯ ಸ್ವಾರ್ಥ ಸಾಧನೆಗೆ ಮುಂದಾಗಿದೆ. ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ. ಇಂಥ ಬಿಜೆಪಿ ವಿರುದ್ಧ ಜನಾಂದೋಲನ ನಡೆಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಡಿ. 27ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕಬೇಕು. ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು 100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ಗಾಂಧೀಜಿ ನಿರ್ಣಯ ಕೈಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ದಿಟ್ಟ ನಾಯಕತ್ವ ವಹಿಸಿ ದೇಶಕ್ಕೆ ಗಾಂಧೀಜಿ ಸ್ವಾತಂತ್ರ್ಯ ತಂದುಕೊಟ್ಟರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ನಮಗೆಲ್ಲ ಹಕ್ಕುಗಳನ್ನು ಕೊಟ್ಟರು.

ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಇದ್ದರೆ ಸದನವೇ ಇರುತ್ತಿರಲಿಲ್ಲ. ಆದರೆ, ಅದೇ ಸದನದಲ್ಲಿಂದು ದುಷ್ಟ ಶಕ್ತಿಗಳ ಕಾರುಬಾರು ಹೆಚ್ಚುತ್ತಿದೆ. ಮಹಿಳೆಯರನ್ನು ಅಪಮಾನಿಸುವ, ಅಗೌರವ ತೋರುವ ನೀಚ ಮನಸ್ಥಿತಿ ಪ್ರದರ್ಶಿಸಲಾಗುತ್ತಿದೆ. ಇವೆಲ್ಲ ಬೆಳವಣಿಗೆಗಳಿಂದ ಸಿದ್ಧಾಂತದೊಂದಿಗೆ ರಾಜಕಾರಣ ಮಾಡುವರೂ ಹಿಂದೇಟು ಹಾಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಡಿ. 27ರಂದು ಬೆಳಗಾವಿ ಮತ್ತೊಮ್ಮೆ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗುತ್ತಿದೆ. ಅಂದು ನಡೆಯುವ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಸಂವಿಧಾನದ ಬದಲಾವಣೆ ಬಿಜೆಪಿಯ ಮೂಲ ಅಜೆಂಡಾ. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಾಯಲ್ಲಿ ಇದಕ್ಕೆ ಪುಷ್ಟಿ ನೀಡುವಂತ ಮಾತು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಮೇಲೆ ನಿಜಕ್ಕೂ ನಂಬಿಕೆ ಇದ್ದರೆ ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವೂ ಒಂದೇ, ಭಾರತ ಮಾತೆಗೆ ಮಾಡುವ ಅವಮಾನವೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಬೆಳಗಾವಿಯಲ್ಲಿ ನಡೆಯುವ ಗಾಂಧಿ ಭಾರತ ಸಮಾವೇಶಕ್ಕೆ ತಾಲೂಕಿನಿಂದ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಆಗಮಿಸಬೇಕು. ಪ್ರತಿ ಬೂತ್‌ಗಳಲ್ಲಿಯೂ ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮುಖಂಡರಾದ ಚಂದ್ರಪ್ಪ ಜಾಲಗಾರ, ಸಿದ್ದನಗೌಡ ಪಾಟೀಲ, ಈರಣ್ಣ ಬೈಲವಾಳ, ಗೀತಾ ಪೂಜಾರ, ಅನಿತಾ ಶಿವೂರ, ಶಿವು ಭದ್ರಾವತಿ, ಶಿವು ತಳವಾರ, ಆದರ್ಶ ಶೆಟ್ಟಿ ಕಲವೀರಪ್ಪ ಪವಾಡಿ, ಪುಟ್ಟಪ್ಪ ನರೇಗಲ್, ಭರಮಣ್ಣ ಶಿವೂರ, ಮೆಹಬೂಬಅಲಿ ಬ್ಯಾಡಗಿ, ಸತ್ತಾರಸಾಬ ಅರಳೇಶ್ವರ ಸೇರಿದಂತೆ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ

ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷತೆ ವಹಿಸಿ 100 ವರ್ಷಗಳು ತುಂಬುತ್ತಿದೆ. ಇಂಥ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ನಾವೆಲ್ಲರೂ ಸೌಭಾಗ್ಯವಂತರು. ಡಿ. 27 ರಂದು ಬೆಳಗಾವಿಯಲ್ಲಿ ನಡೆಯುವ ಗಾಂಧಿ ಭಾರತ-100 ಐತಿಹಾಸಿಕ ಸಮಾವೇಶ ಕಣ್ತುಂಬಿಕೊಳ್ಳೋಣ. ಸ್ವಯಂಪ್ರೇರಿತರಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಸೇರೋಣ.

- ಶ್ರೀನಿವಾಸ ಮಾನೆ, ಶಾಸಕ

Share this article