ಕುರ್ಚಿ, ಕಮಿಷನ್, ಅಧಿಕಾರಕ್ಕಾಗಿ ರೈತರ ಮರೆತ ಕಾಂಗ್ರೆಸ್‌

KannadaprabhaNewsNetwork |  
Published : Nov 14, 2025, 01:15 AM IST
13ಕೆಡಿವಿಜಿ1-ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಕೇವಲ ಕುರ್ಚಿ, ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸರ್ಕಾರ ಹೊಡೆದಾಡುತ್ತಿದೆ. ರಾಜ್ಯ ರೈತರು, ಜನರನ್ನು ಬೀದಿಪಾಲು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.

- ಜನರನ್ನು ಬೀದಿಪಾಲು ಮಾಡುತ್ತಿರುವ ಸರ್ಕಾರ: ರೇಣುಕಾಚಾರ್ಯ ವಾಗ್ದಾಳಿ । 18ರಂದು ಹೊನ್ನಾಳಿ- ನ್ಯಾಮತಿ ತಾಲೂಕುಗಳ ಬಂದ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಕೇವಲ ಕುರ್ಚಿ, ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸರ್ಕಾರ ಹೊಡೆದಾಡುತ್ತಿದೆ. ರಾಜ್ಯ ರೈತರು, ಜನರನ್ನು ಬೀದಿಪಾಲು ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರ ಮಧ್ಯೆಯ ತೀವ್ರ ಪೈಪೋಟಿಗೆ ನಾಡಿನ ರೈತರು, ಜನಸಾಮಾನ್ಯರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಇಂದಿಗೂ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಸತ್ತೇ ಹೋಗಿದೆ. ಆಡಳಿತ ಪಕ್ಷ ಅಭಿವೃದ್ಧಿಗೆ ಇಚ್ಛಾಶಕ್ತಿ, ಬದ್ಧತೆ ತೋರುತ್ತಿಲ್ಲ ಎಂದು ಟೀಕಿಸಿದರು.

ಬೆಳೆಗಾರರ ಪೂರ್ವಭಾವಿ ಸಭೆ:

ಮೆಕ್ಕೆಜೋಳ, ಭತ್ತ ಬೆಳೆಗಳ ಬೆಲೆ ಕುಸಿದಿದ್ದರೂ ರಾಜ್ಯ ಸರ್ಕಾರ ನೆರವಿಗೆ ಬರುತ್ತಿಲ್ಲ. ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನೂ ಸ್ಥಾಪಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರೈತವಿರೋಧಿ, ಜನವಿರೋಧಿ ನೀತಿಗಳನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಶೀಘ್ರವೇ ರಾಜ್ಯಮಟ್ಟದ ಮೆಕ್ಕೆಜೋಳ, ಭತ್ತ, ಕಬ್ಬು ಬೆಳೆಗಾರರ ಪೂರ್ವಭಾವಿ ಸಭೆ ಕರೆದು, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಭತ್ತ, ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೇವಲ ವರ್ತಕರ ಸಭೆ ಮಾತ್ರ ಮಾಡದೇ, ರೈತರ ಸಭೆಯನ್ನೂ ಕರೆಯಬೇಕು. ಆ ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆ ಮಾಡಬೇಕು. ಇಲ್ಲದಿದ್ದರೆ ದಾವಣಗೆರೆ ಜಿಲ್ಲಾದ್ಯಂತ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಜಿಲ್ಲಾಡಳಿತ ವಿರುದ್ಧವೂ ಹೋರಾಟ ನಡೆಸಬೇಕಾದೀತು ಎಂದು ರೇಣುಕಾಚಾರ್ಯ ಎಚ್ಚರಿಸಿದರು.

ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ, ರೈತ ಮುಖಂಡರಾದ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಎಚ್.ಪಿ.ವಿಶ್ವಾಸ್, ಕಂದಗಲ್ಲು ರೇವಣ್ಣ, ಕುರ್ಕಿ ರೇವಣಸಿದ್ದಪ್ಪ, ಜಿಗಳಿ ಆನಂದ ಇತರು ಇದ್ದರು.

- - -

(ಬಾಕ್ಸ್‌)

* 18ರಂದು ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳ ಬಂದ್‌

- ಕಬ್ಬು ಬೆಳೆಗಾರರ ಹೋರಾಟ ಮೀರಿಸುವಂತೆ ದಾವಣಗೆರೆಯಲ್ಲಿ ಪ್ರತಿಭಟಿಸುವ ಎಚ್ಚರಿಕೆ ದಾವಣಗೆರೆ: ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ಸ್ಥಾಪಿಸಿ, ಹೆಚ್ಚುವರಿ ಬೆಲೆ ನಿಗದಿಗೆ ಒತ್ತಾಯಿಸಿ ನ.18ರಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಬಂದ್‌ ನಡೆಸಲಾಗುವುದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2400, ಪ್ರತಿ ಕ್ವಿಂ. ಭತ್ತಕ್ಕೆ ₹2389 ನಿಗದಿಪಡಿಸಿದೆ. ತೆಲಂಗಾಣ ಮಾದರಿಯಲ್ಲಿ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರವೂ ₹500 ಬೋನಸ್ ನೀಡಲಿ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ 1,28,647 ಹೆಕ್ಟೇರ್ ಮೆಕ್ಕೆಜೋಳ, 67,300 ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದಾರೆ. ಪ್ರತಿ ಎಕರೆಗೆ 25 ಕ್ವಿಂಟಲ್ ಭತ್ತ ಬಂದರೂ, ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಭತ್ತಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹1 ಸಾವಿರ ಬೋನಸ್ ನೀಡಬೇಕು. ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ₹1600-₹1700 ಇದೆ. ಈಗಾಗಲೇ ರೈತರು ಮೆಕ್ಕೆಜೋಳ ಕಟಾವು ಮಾಡಿ, ಎಪಿಎಂಸಿ ಯಾರ್ಡ್‌ಗೆ ತಂದಿದ್ದಾರೆ. ರೈತರ ನೆರವಿಗೆ ಸರ್ಕಾರ ಧಾವಿಸಲಿ. ಕನಿಷ್ಠ ₹3 ಸಾವಿರಕ್ಕೆ ಮೆಕ್ಕೆಜೋಳ ಖರೀದಿಸಬೇಕು ಎಂದರು.

ಮಾತೆತ್ತಿದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಮೊದಲು ಬದ್ಧತೆ, ಇಚ್ಛಾಶಕ್ತಿ ಮೆರೆಯಲಿ. ನಮ್ಮ ಸರ್ಕಾರವಿದ್ದಾಗ ಭತ್ತಕ್ಕೆ ಹೆಚ್ಚುವರಿ ಬೋನಸ್ ನೀಡಿದ್ದೆವು. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ರೈತರು ಬೀದಿ ಪಾಲಾಗುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಬ್ಬು ಹೋರಾಟವನ್ನು ಮೀರಿಸುವಂತಹ ಹೋರಾಟ ದಾವಣಗೆರೆಯಲ್ಲಿ ಮಾಡುತ್ತೇವೆ. ಪೂರ್ವಭಾವಿ ಸಭೆ ಮಾಡಿ, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ಮೆಕ್ಕೆಜೋಳ, ಭತ್ತಕ್ಕೆ ಹೆಚ್ಚುವರಿಯಾಗಿ ಖಜಾನೆ ಹಣ ನೀಡಿ, ರೈತರಿಗೆ ಸ್ಪಂದಿಸದಿದ್ದರೆ ದೊಡ್ಡ ಹೋರಾಟ ಆಗಲಿದೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.

- - -

-13ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ