ಅಂಜಲಿ ಅಂಬಿಗೇರ ಹತ್ಯೆ ಮರೆತ ಕಾಂಗ್ರೆಸ್‌!

KannadaprabhaNewsNetwork |  
Published : May 18, 2024, 12:37 AM IST
154 | Kannada Prabha

ಸಾರಾಂಶ

ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಭೇಟಿ ನೀಡುವುದು ಒಂದು ಕಡೆ ಇರಲಿ, ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕಾಲೇಜು ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಕೊಲೆಯಾದಾಗ ಸ್ಥಳೀಯ ಕಾಂಗ್ರೆಸ್‌ ಮುಖಂಡರು ತೋರಿದ ಕಾಳಜಿ, ಕಳಕಳಿ ಮನೆಯಲ್ಲೇ ಕೊಲೆಯಾದ ಅಂಜಲಿ ಅಂಬಿಗೇರ ಎಂಬ ನತದೃಷ್ಟೆಗೆ ಏಕೆ ತೋರುತ್ತಿಲ್ಲ?

ಈ ಪ್ರಶ್ನೆಗಳೀಗ ಹುಬ್ಬಳ್ಳಿ-ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅಂಜಲಿ ಆಗಂತುಕನ ಚೂರಿ ಇರಿತಕ್ಕೆ ಬಲಿಯಾಗಿ ಮೂರು ದಿನ ಕಳೆದರೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರನ್ನು ಹೊರತು ಪಡಿಸಿದರೆ ಒಬ್ಬೇ ಒಬ್ಬ ಕಾಂಗ್ರೆಸ್‌ ಮುಖಂಡ ಪ್ರತಿಕ್ರೀಯಿಸಿಲ್ಲ, ಅಂಜಲಿ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯ ತೋರದೇ ಇರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಬಿವಿಬಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಹತ್ಯೆ ನಡೆದು ಬರೋಬ್ಬರಿ 1 ತಿಂಗಳು (ಏ.18ಕ್ಕೆ ನಡೆದಿತ್ತು ಹತ್ಯೆ). ಆಗ ಕಾಂಗ್ರೆಸ್‌ನ ಬಹುತೇಕ ಮುಖಂಡರು ಬಂದು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಬರೀ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಪ್ರಸಾದ ಅಬ್ಬಯ್ಯ ಅಷ್ಟೇ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್‌.ಕೆ. ಪಾಟೀಲ ಸೇರಿದಂತೆ ಬಹುತೇಕ ಎಲ್ಲ ಸಚಿವರು ಹಿರೇಮಠ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದರು. ಇದಕ್ಕಾಗಿ ಸರ್ಕಾರ ತ್ವರಿತಗತಿ ನ್ಯಾಯಾಲಯ ತೆರೆದಿದೆ. ಸಿಐಡಿ ತನಿಖೆಗೆ ನಡೆಸುತ್ತಿದೆ.

ಆಗ ಬಿಜೆಪಿ, ಜೆಡಿಎಸ್‌ ಹೀಗೆ ಎಲ್ಲ ರಾಜಕೀಯ ಪಕ್ಷಗಳು ಭೇಟಿ ನೀಡಿದ್ದವು. ವಿವಿಧ ಮಠಾಧೀಶರು ಎಲ್ಲರೂ ಭೇಟಿ ಕೊಟ್ಟು ಸಾಂತ್ವನ ಹೇಳುತ್ತಿದ್ದರು. ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತಿದ್ದರು.

ಅಂಜಲಿ ಮರೆತ ಕೈಪಡೆ:

ಇದೀಗ ನೇಹಾ ಹತ್ಯೆಯಾಗಿ ಒಂದೇ ತಿಂಗಳು ಕಳೆಯುವಷ್ಟರಲ್ಲೇ ಅಂತಹದ್ದೇ ಘಟನೆ ಮತ್ತೊಂದು ನಡೆದಿದೆ. ನೇಹಾ ಹತ್ಯೆ ಕಾಲೇಜ್‌ ಕ್ಯಾಂಪಸ್‌ನಲ್ಲಾದರೆ, ಅಂಜಲಿ ಹತ್ಯೆಯನ್ನು ಆರೋಪಿ ಮನೆಗೇ ನುಗ್ಗಿ ಮಾಡಿ ಪರಾರಿಯಾಗಿದ್ದ. ಆಗ ನೇಹಾ ಹತ್ಯೆಗೆ ಎಷ್ಟು ಪ್ರಾಮುಖ್ಯತೆಯನ್ನು ಬಿಜೆಪಿ ನೀಡಿತ್ತೋ ಅಷ್ಟೇ ಪ್ರಾಮುಖ್ಯತೆಯನ್ನು ಈಗಲೂ ನೀಡಿದೆ. ಹತ್ಯೆಯಾದ ದಿನದಿಂದಲೇ ಬಿಜೆಪಿ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಅಭಯ ಹಸ್ತ ನೀಡಿದ್ದಾರೆ. ಆರೋಪಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಆದರೆ ಕಾಂಗ್ರೆಸ್ಸಿಗರು ಮಾತ್ರ ಅಂಜಲಿ ಹತ್ಯೆಯನ್ನೇ ಮರೆತ್ತಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ಪ್ರತಿನಿಧಿಸುವ ಪೂರ್ವ ಕ್ಷೇತ್ರದಲ್ಲೇ ಈ ಘಟನೆ ನಡೆದರೂ ಅವರೂ ಅತ್ತ ಸುಳಿದಿಲ್ಲ. ಬರೀ ಪತ್ರಿಕಾ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಭೇಟಿ ನೀಡುವುದು ಒಂದು ಕಡೆ ಇರಲಿ, ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ಹಾಗೆ ನೋಡಿದರೆ ಲಾಡ್‌ ಭೇಟಿ ನೀಡಿ ಇಲ್ಲಿನ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿತ್ತು. ಆದರೆ ಲಾಡ್‌ ಸಾಹೇಬ್ರು ಕಾಣೆಯಾಗಿದ್ದಾರೆ. ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ ಸೇರಿದಂತೆ ಯಾವೊಬ್ಬ ನಾಯಕನೂ ಭೇಟಿ ನೀಡುವ ಸೌಜನ್ಯತೆ ತೋರುತ್ತಿಲ್ಲ.

ಕೈ ಪಡೆ ಮರೆಯಲು ಕಾರಣವೇನು?:

ನೇಹಾ ಹತ್ಯೆಯಾದ ದಿನವೇ ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ನೀಡಿದ್ದ ಹೇಳಿಕೆ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿತ್ತು. ಬಳಿಕ ಇಬ್ಬರು ನಾಯಕರು ಕ್ಷಮೆ ಕೇಳಿದ್ದುಂಟು. ಆದರೆ ಜನರ ಮನಸಿನಿಂದ ಸರ್ಕಾರದ ಬಗ್ಗೆ ಇದ್ದ ಆಕ್ರೋಶ ಮಾತ್ರ ದೂರವಾಗಿರಲಿಲ್ಲ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆದಿದ್ದ ಘಟನೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಕಾಂಗ್ರೆಸ್‌ನ್ನು ಅಕ್ಷರಶಃ ನಡುಗಿಸಿತ್ತು. ಬಿಜೆಪಿ ಈ ಪ್ರಕರಣವನ್ನು ಸರಿಯಾಗಿ ಬಳಸಿಕೊಂಡಿತ್ತು. ಹೀಗಾಗಿ ಎಲ್ಲಿ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದುಕೊಂಡು ಮುಖ್ಯಮಂತ್ರಿಯಾದಿಯಾಗಿ ಸಚಿವರು, ಕಾಂಗ್ರೆಸ್‌ ಮುಖಂಡರು ಹೀಗೆ ಸಾಲು ಸಾಲಾಗಿ ಹುಬ್ಬಳ್ಳಿಗೆ ಬಂದು ಕಣ್ಣೀರು ಸುರಿಸಿದ್ದರು.

ಇದೀಗ ಲೋಕಸಭೆ ಚುನಾವಣೆ ಮುಗಿದಿದೆ. ಬಿಜೆಪಿ ಎಷ್ಟೇ ಪ್ರಯತ್ನ ಮಾಡಿದರೂ ಆಗುವುದೇನು? ಎಂಬ ನಿರ್ಲಕ್ಷ್ಯ ಭಾವನೆ ಕಾಂಗ್ರೆಸ್ಸಿಗರಲ್ಲಿ ಮನೆ ಮಾಡಿದಂತಿದೆ. ಆಗ ತೋರಿದ್ದ ಕಳಕಳಿ, ಕಾಳಜಿ ಈಗ ಏಕೆ ತೋರುತ್ತಿಲ್ಲ? ಇದಕ್ಕೆ ಕಾರಣವೇನು? ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇದಕ್ಕೆ ಉತ್ತರವನ್ನೂ ಕಾಂಗ್ರೆಸ್ಸಿಗರೇ ನೀಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!