ಶಿವಕುಮಾರ ಕುಷ್ಟಗಿ ಗದಗ
ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಂಪೂರ್ಣ ಮಳೆ ಕೊರತೆಯಿಂದ ಜಿಲ್ಲೆಯ 7 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿ ಕಾರ್ಮಿಕರು ವಲಸೆ ಹೋಗದಂತೆ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಿದೆ. ಪ್ರಸ್ತುತ ಶಾಲೆಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ತೊಂದರೆಯಾಗಬಾರದೆಂದು ಸರ್ಕಾರ ಬರಗಾಲದ ಬಿಸಿಯೂಟವನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಾರಂಭಿಸುವಂತೆ ಏ. 5 ರಂದು ಆದೇಶ ಹೊರಡಿಸಿತ್ತು.
ಗದಗ ತಾಲೂಕಿನಲ್ಲಿ ಉತ್ತಮ ಕಾರ್ಯಗದಗ ಶಹರ ವ್ಯಾಪ್ತಿಯ 36 ಕೇಂದ್ರಗಳಲ್ಲಿ 7093 ಹಾಗೂ ಗದಗ ಗ್ರಾಮೀಣ ವ್ಯಾಪ್ತಿಯ 79 ಕೇಂದ್ರಗಳಲ್ಲಿ 14668 ವಿದ್ಯಾರ್ಥಿಗಳು ಬಿಸಿಯೂಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು, ಏ. 11 ರಿಂದ ಪ್ರಾರಂಭವಾಗಿರುವ ಈ ಯೋಜನೆ ಮೇ 28 ಕ್ಕೆ ಕೊನೆಗೊಳ್ಳಲಿದೆ. ಇದಕ್ಕಾಗಿ ಗದಗ ತಾಲೂಕು ಬಿಸಿಯೂಟದ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಅಡುಗೆಯವರು, ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರು ಅತ್ಯಂತ ಅಚ್ಚುಕಟ್ಟಾಗಿ ಕೈ ಜೋಡಿಸಿದ ಹಿನ್ನೆಲೆ ಬಿಸಿಯೂಟ ಸಾಕಾರಗೊಂಡಿದೆ.
ಶಾಲಾ ಅವಧಿಯಲ್ಲಿ ನೀಡುವ ಬಿಸಿಯೂಟಕ್ಕಿಂತ ಕೊಂಚ ಭಿನ್ನವಾಗಿಯೇ ಊಟ ನೀಡಲಾಗುತ್ತಿದ್ದು, ಅನ್ನ, ತರಕಾರಿ ಸಾಂಬಾರು, ಉಪ್ಪಿಟ್ಟು, ಇಡ್ಲಿ, ಚಪಾತಿ ಸೇರಿದಂತೆ ಮಕ್ಕಳಿಗೆ ಆಗಾಗ್ಗೆ ಸಿಹಿ ತಿನಿಸುಗಳನ್ನು ಕೂಡಾ ಬಿಸಿಯೂಟದವರು ವ್ಯವಸ್ಥೆ ಮಾಡಿದ್ದು, ಇದರಿಂದ ಶಾಲೆಗಳು ಪ್ರಾರಂಭವಾಗುವ ಪೂರ್ವದಲ್ಲಿಯೇ ಮಕ್ಕಳ ಹಾಜರಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಗದಗ ತಾಲೂಕಿನಲ್ಲಿ ನಿತ್ಯವೂ 13ಸಾವಿರಕ್ಕೂ ಹೆಚ್ಚಿನ ಮಕ್ಕಳು ಬಿಸಿಯೂಟ ಸವಿಯುತ್ತಿದ್ದಾರೆ. ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಅಡುಗೆಯವರು, ಗ್ರಾಮಸ್ಥರು, ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ಬಿಸಿಯೂಟದೊಂದಿಗೆ ಮಕ್ಕಳಿಗೆ ವಿಶೇಷ ತರಗತಿಗಳು ಕೂಡಾ ಆಯಾ ಶಾಲಾ ಹಂತಗಳಲ್ಲಿ ನಡೆಯುತ್ತಿವೆ ಎಂದು ಗದಗ ತಾಲೂಕು ಅಕ್ಷರದಾಸೋಹ ಅಧಿಕಾರಿ ಕೊಟ್ರೇಶ ವಿಭೂತಿ ಹೇಳಿದರು.