ಕನ್ನಡಪ್ರಭ ವಾರ್ತೆ ಧಾರವಾಡ
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಗುರಿ ತಲುಪುವುದಕ್ಕಾಗಿ ರಾಜ್ಯದ ಆರೂವರೆ ಕೋಟಿ ಜನರ ಕ್ಷೇಮಾಭಿವೃದ್ಧಿ ಮರೆತು ದುರಾಡಳಿತ ನಡೆಸುತ್ತಿದೆ ಎಂದು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಕ್ಕೆ ಬಂದು ಕಳೆದ ಐದು ತಿಂಗಳಿಂದ ಬರೀ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಸರ್ಕಾರದ ಸಾಧನೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನಾದರೂ ಸರಿಯಾಗಿ ನೀಡಿದ್ದಾರೆ ಎಂದರೆ ಅದೂ ಇಲ್ಲ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ರೈತರ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದ 195 ತಾಲೂಕುಗಳಲ್ಲಿ ಬರ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಜಿಲ್ಲಾ ಉಸ್ತುವಾರಿಗಳು ಯಾರೊಬ್ಬರೂ ಹೊಲಗಳಿಗೆ ಹೋಗಿ ನೈಜ ಸ್ಥಿತಿ ಅರಿಯುವ ಪ್ರಯತ್ನ ಮಾಡಿಲ್ಲ. 135 ಜನ ಕಾಂಗ್ರೆಸ್ ಶಾಸಕರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
6ನೇ ಭಾಗ್ಯ ರೈತ ಆತ್ಮಹತ್ಯೆಮುಂಗಾರು ಹಂಗಾಮು ಕಳೆದುಕೊಂಡ ರೈತರಿಗೆ ಹಿಂಗಾರಿನಲ್ಲೂ ಬರ ಬೀಳುವ ಭಯ ಶುರುವಾಗಿದೆ. ನೀರಾವರಿ ಇದ್ದವರು ನೀರು ಹಾಯಿಸಿ ಬೆಳೆ ಬೆಳೆಯೋಣ ಎಂದರೆ ವಿದ್ಯುತ್ ಕೊಡುತ್ತಿಲ್ಲ. ಈ ಮೊದಲು ಏಳು ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು ಈಗ ಎರಡು ಗಂಟೆಗೆ ಇಳಿಸಲಾಗಿದೆ. ವಿದ್ಯುತ್ ಕೊರತೆಗೆ ಹಣ ಕೊಟ್ಟು ವಿದ್ಯುತ್ ಖರೀದಿಸುವುದನ್ನು ಬಿಟ್ಟು ಉಪ ಮುಖ್ಯಮಂತ್ರಿಗಳು ಕೇಂದ್ರದತ್ತ ಬೊಟ್ಟು ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಕತ್ತಲು ಆವರಿಸಿದೆ. ಜೊತೆಗೆ ರೈತರಿಗೆ ಮೂರು ತಿಂಗಳಿಗೆ ನೀಡುತ್ತಿದ್ದ 2 ಸಾವಿರದ ಯೋಜನೆ ಸಹ ಬಂದ್ ಮಾಡಲಾಗಿದೆ. ಯಂತ್ರಧಾರೆ ಯೋಜನೆ ನಿಲ್ಲಿಸಲಾಗಿದೆ. ರೈತ ಪರ ಯೋಜನೆ ರೂಪಿಸುವ ಮೂಲಕ ರೈತ ಆತ್ಮಹತ್ಯೆ ತಡೆಯಬೇಕಾದ ಕಾಂಗ್ರೆಸ್ ಸರ್ಕಾರ, ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು 6ನೇ ಭಾಗ್ಯ ರೈತ ಆತ್ಮಹತ್ಯೆ ಎನ್ನುವಂತಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಜನರು ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ. ಕೈ ಆಡಳಿತದಿಂದ ರಾಜ್ಯದ ಜನತೆಗೆ ಬೇಸತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮತ್ತೆ ಒಂದಾಗಿದ್ದು, ಕಾಂಗ್ರೆಸ್ ಪಕ್ಷದ ವಿಫಲತೆಯನ್ನು ರಾಜ್ಯದ ಜನತೆಗೆ ತಿಳಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದಿಂದ ಪಕ್ಷದ ಸಂಘಟನೆ ನಡೆಯುತ್ತಿದ್ದು ಎರಡು ಪಕ್ಷಗಳ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸೀಟುಗಳನ್ನು ಗೆಲ್ಲಲಿದ್ದೇವೆ ಎಂದು ಜಿ.ಡಿ. ದೇವೇಗೌಡ ಭರವಸೆ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ರಾಜುಗೌಡ ಪಾಟೀಲ, ಜೆಡಿಎಸ್ ನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಗ್ರಾಮೀಣ ಜಿಲ್ಲಾಧ್ಯಕ್ಷ ಗಂಗಾಧರಮಠ, ಮುಖಂಡರಾದ ಮಂಜುನಾಥ ಹಗೇದಾರ ಮತ್ತಿತರರು ಇದ್ದರು.
ಸಾಫ್ಟ್ ಕಾರ್ನರ್..ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಪ್ರೀತಿ, ಸಾಫ್ಟ್ ಕಾರ್ನರ್ ಈಗಲೂ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿ.ಟಿ. ದೇವೇಗೌಡರು, ಸಿದ್ದರಾಮಯ್ಯ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಮಾಡುವ ಕೆಲಸದ ಬಗ್ಗೆ ಮಾತ್ರ ಟೀಕೆ ಮಾಡುತ್ತಿದ್ದೇನೆ. ಅವರ ಮೇಲೆ ಪ್ರೀತಿ, ಸಾಫ್ಟ್ ಕಾರ್ನರ್ ಹಿಂದೆಯೂ ಇತ್ತು ಈಗಲೂ ಇದೆ.