ಬೆಲೆ ಏರಿಕೆಯ ಮೂಲಕ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್: ಅರವಿಂದ ಬೆಲ್ಲದ

KannadaprabhaNewsNetwork |  
Published : Jun 17, 2024, 01:36 AM IST
ಶಾಸಕ ಅರವಿಂದ ಬೆಲ್ಲದ | Kannada Prabha

ಸಾರಾಂಶ

ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಕ್ಕೆ ಹೊಡೆತ ಬೀಳುತ್ತಿದ್ದು, ಕೈಗಾರಿಕೆಗಳು ಬರದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿ: ಕರ್ನಾಟಕದ ಜನತೆಗೆ ಅಕ್ಷಯ ಪಾತ್ರೆ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಬೆಲೆ ಏರಿಕೆ ಚೊಂಬು ನೀಡಿದೆ ಎಂದು ವಿಧಾನಸಭೆ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದರು.

ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸುಳ್ಳು ಭರವಸೆ, ಭ್ರಷ್ಟಾಚಾರಕ್ಕೆ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಇದರ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈಗ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಕೈಯಲ್ಲಿ ಜನರಿಗೆ ಕೊಡುತ್ತಿದ್ದ ಹಣವನ್ನು ಎರಡು ಕೈಯಲ್ಲಿ ಕಸಿದುಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಜನರ ದಿಕ್ಕು ತಪ್ಪಿಸುತ್ತಿದೆ: ಪೆಟ್ರೋಲ್, ಡೀಸೆಲ್ ಬೆಲೆ ₹3ರಿಂದ ₹3.50ರ ವರೆಗೆ ಏರಿಕೆ ಮಾಡಿದ್ದಾರೆ. ಈಗಾಗಲೇ ದಿನಬಳಕೆ ವಸ್ತುಗಳಾದ ತೊಗರಿ, ಸೋನಾಮಸೂರಿ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ವೇಳೆ ಬೆಲೆ ಏರಿಕೆ ತಗ್ಗಿಸುವ ಬದಲು ಬೆಲೆ ಏರಿಕೆ ಮಾಡಿದೆ. ಪಕ್ಕದ ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಕ್ಕಿಂತ ಕರ್ನಾಟಕದಲ್ಲಿ ತೈಲ ಬೆಲೆ ಕಡಿಮೆ ಇದೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆ ಕಡಿಮೆಯಿದೆ. ಅದನ್ನು ಮರೆಮಾಚಿ ಹೆಚ್ಚಿರುವ ರಾಜ್ಯಗಳ ಉದಾಹರಣೆ ನೀಡಿ ತೈಲ ಬೆಲೆ ಏರಿಕೆ ಮಾಡಿರುವುದು ಎಷ್ಟು ಸರಿ ಎಂದರು.

ಇಂದು ಪ್ರತಿಭಟನೆ: ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಕ್ಕೆ ಹೊಡೆತ ಬೀಳುತ್ತಿದ್ದು, ಕೈಗಾರಿಕೆಗಳು ಬರದಂತಹ ವಾತಾವರಣ ನಿರ್ಮಾಣವಾಗಲಿದೆ. ಹೀಗಾಗಿ ಸರ್ಕಾರ ಶ್ರೀಮಂತ ಪರವಾಗಿದೆಯೋ ಅಥವಾ ಬಡವರ ಪರವಾಗಿದೆಯೋ ಎಂಬುದನ್ನು ಸ್ಪಷ್ಟಪಡಿಸಲಿ. ಬೆಲೆ ಏರಿಕೆ ನೀತಿ ಖಂಡಿಸಿ ಜೂ. 17ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪೊಲೀಸರ ನಡೆ ಖಂಡನಾರ್ಹ: ಬಕ್ರೀದ್ ಹಬ್ಬದ ನಿಮಿತ್ತ ಅಲ್ಪಸಂಖ್ಯಾತರು ಕಾನೂನು ಬಾಹಿರವಾಗಿ ಗೋವುಗಳ ಹತ್ಯೆ ಮಾಡುತ್ತಿದ್ದಾರೆ. ಧಾರವಾಡದಲ್ಲಿ ಗೋವು ಹತ್ಯೆ ತಡೆಯಲು ಮುಂದಾದ ಸೋಮಶೇಖರ ಮೇಲೆ ಅಲ್ಪಸಂಖ್ಯಾತ ನೂರಾರು ಗುಂಡಾಗಳು ಹಲ್ಲೆ ನಡೆಸಿದ್ದಾರೆ. ಇದೀಗ ಹಲ್ಲೆಗೆ ಒಳಗಾದ ವ್ಯಕ್ತಿಯ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನಾರ್ಹ ಎಂದರು.

ಸರ್ಕಾರ ಕಾನೂನು ಪಾಲಿಸಲಿ: ರಾಜ್ಯದಲ್ಲಿ ಅಲ್ಪಸಂಖ್ಯಾತರ ಗುಂಡಾ ಮತ್ತು ಅಕ್ರಮ ಚಟುವಟಿಕೆ ಎಲ್ಲೆ ಮೀರಿದೆ. ಇದರಿಂದ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಇನ್ನು ಸಚಿವ ಜಮೀರ ಅಹ್ಮದ ಗುಂಡಾಗಳ ಪರ ನಿಂತು ರಾಜಿಸಂಧಾನ ಮತ್ತು ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಕೂಡಲೇ ಕೈಬಿಟ್ಟು ಹಿಂದೂಗಳಿಗೆ ರಕ್ಷಣೆ ಒದಗಿಸುವ ಮತ್ತು ಕಾನೂನು ಪಾಲನೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಳೇ ಹುಬ್ಬಳ್ಳಿಯಲ್ಲಿ ದಾಖಲಾದ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೆಲ್ಲದ, ದೂರು ನೀಡಿದ ವ್ಯಕ್ತಿ ಯಾರೆಂಬುದೇ ನನಗೆ ಗೊತ್ತಿಲ್ಲ. ಆ ಪ್ರಕರಣದಲ್ಲಿ ಸತ್ವ ಇಲ್ಲ ಎಂದರು.

ನಟ ದರ್ಶನ ಮನುಷ್ಯನೋ? ರಾಕ್ಷಸನೋ?: ಚಿತ್ರನಟ ದರ್ಶನ ಹಾಗೂ ಅವನ ತಂಡ ಎಸಗಿರುವ ಕೃತ್ಯ ನೋಡಿದರೆ ಅವನು ಮನುಷ್ಯನೋ? ರಾಕ್ಷಸನೋ ಎಂಬ ಅನುಮಾನ ಮೂಡುತ್ತಿದೆ. ಅವನು ಹೀಗೆ ಇದ್ದಾನೆ ಎಂಬುದು ನಮಗೆ ಗೊತ್ತಿರಲಿಲ್ಲ. ಹೀಗಾಗಿ ಅವನನ್ನು ರಾಜ್ಯದ ಕೃಷಿ ರಾಯಭಾರಿಯಾಗಿ ಮಾಡಲಾಗಿತ್ತು. ಇಂದು ರಾಜ್ಯ ಸರ್ಕಾರ ಸಮಾಜ ವಿರೋಧಿ, ಕ್ರಿಮಿನಲ್ ಕೆಲಸ ಮಾಡುತ್ತಿರುವವರಿಗೆ ರಾಜಾ ಮರ್ಯಾದೆ ನೀಡುತ್ತಿದೆ. ಸರ್ಕಾರದ ಈ ನೀತಿಯಿಂದ ಅಪರಾಧ ಚಟುವಟಿಕೆ ಹೆಚ್ಚಾಗುತ್ತಿವೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದರು.

ಈ ವೇಳೆ ಹು-ಧಾ ಮಹಾನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಜಿಲ್ಲಾ ವಕ್ತಾರ ರವಿ ನಾಯಕ, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಶಾಂತ ಹಾವಣಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ