ರಾಜ್ಯ, ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ : ಡಿಕೆ

KannadaprabhaNewsNetwork |  
Published : Jun 29, 2026, 01:45 AM IST
Congress

ಸಾರಾಂಶ

2028ಕ್ಕೆ ಕರ್ನಾಟಕದಲ್ಲಿ ಹಾಗೂ 2029ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದಕ್ಕೆ ದೇಶದ ಕಾರ್ಮಿಕರು, ಜನಸಾಮಾನ್ಯರ ಬೆಂಬಲ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

 ಬೆಂಗಳೂರು :  2028ಕ್ಕೆ ಕರ್ನಾಟಕದಲ್ಲಿ ಹಾಗೂ 2029ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದಕ್ಕೆ ದೇಶದ ಕಾರ್ಮಿಕರು, ಜನಸಾಮಾನ್ಯರ ಬೆಂಬಲ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಎಐಟಿಯುಸಿ (ಇಂಟೆಕ್) 316ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇಂಟೆಕ್ ಮೂಲಕ ದೇಶದ ಶ್ರಮಿಕರ, ಕಾರ್ಮಿಕರ ಬಲ ಹೆಚ್ಚಾಗಿದೆ. ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಇಂಟೆಕ್ ಸದಸ್ಯರು ಮುಖ್ಯವಾಗುತ್ತಾರೆ ಎಂದರು.

ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ಇಂಟೆಕ್, ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಇವು ಕಾಂಗ್ರೆಸ್ ಪಕ್ಷದ ನಾಲ್ಕು ಆಧಾರ ಸ್ತಂಭಗಳು ಎಂದು ಹೇಳಿದ್ದರು. ನಾನು ವಿದ್ಯಾರ್ಥಿ ನಾಯಕನಾಗಿ ನಂತರ ರಾಜಕೀಯದಲ್ಲಿ ಮುಖ್ಯವಾಹಿನಿಗೆ ಬಂದವನು. ನನಗೆ ಸಂಘಟನೆಯ ಶಕ್ತಿಯ ಬಗ್ಗೆ ಅರಿವಿದೆ ಎಂದು ಹೇಳಿದರು.

ಕೃಷಿಕ, ಶಿಕ್ಷಕ, ಸೈನಿಕ, ಕಾರ್ಮಿಕ ಇವರು ಇಲ್ಲದೇ ಸಮಾಜ ಮುನ್ನಡೆಯದು. ಈ ದೇಶಕ್ಕೆ ಕಾರ್ಮಿಕರ ಶ್ರಮ, ಶಕ್ತಿ, ಬದ್ಧತೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಕಾರ್ಮಿಕ ಇಲ್ಲದೆ ಹೋದರೆ ಯಾವುದೇ ದೇಶದ ಆರ್ಥಿಕತೆ ಬೆಳೆಯುವುದಿಲ್ಲ. ಉದ್ದಿಮೆದಾರರು ಪ್ರಬಲರಾದರೆ ಕಾರ್ಮಿಕರೂ ಬಲವಾಗುತ್ತಾರೆ.‌ ಜೊತೆಗೂಡಿದರೆ ಆರಂಭ, ನಂತರ ಪ್ರಗತಿ ಎಂದು ಪ್ರತಿಪಾದಿಸಿದರು.

ಕರ್ನಾಟಕದಲ್ಲಿ ಎಸ್ಐಆರ್ ಪ್ರಾರಂಭ:

ಜೂನ್ 30ರಿಂದ ರಾಜ್ಯದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಾರಂಭ ಆಗುತ್ತಿದೆ.‌ ಕಾಂಗ್ರೆಸ್‌ ಬೆಂಬಲಿತ ಮತಗಳನ್ನು ಡಿಲೀಟ್ ಮಾಡಿಸುವ ಪ್ರಯತ್ನಗಳು ನಡೆಯುವ ಸಾಧ್ಯತೆ ಇರುತ್ತದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಇಂತಹದ್ದು ಕಂಡುಬಂದಿದೆ. ಈ ದೇಶದ ಶ್ರಮಿಕರ, ಕಾರ್ಮಿಕರ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಕಾರ್ಮಿಕರಿಂದ ಹಿಡಿದು ಎಲ್ಲರೂ ಇದರ ಬಗ್ಗೆ ಎಚ್ಚರದಿಂದ ಇರಬೇಕು. ಮತಗಳು ಡಿಲೀಟ್ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿವಕುಮಾರ್‌ ಅವರು ಕರೆ ನೀಡಿದರು.

ಸಂಜೀವ್ ರೆಡ್ಡಿ ಅವರು ಸಾಕಷ್ಟು ವರ್ಷದಿಂದ ಈ ಸಂಘಟನೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಆಸ್ಕರ್‌ ಫರ್ನಾಂಡೀಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಕ್ರಾಂತಿಕಾರಿ ಬದಲಾವಣೆ ತಂದರು. ಕಾರ್ಮಿಕ ಚಳವಳಿಗೆ ಮಾನ್ಯತೆ ನೀಡಿದರು. ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆ ತಂದರು.‌ ಕಾರ್ಮಿಕರ ಮಕ್ಕಳಿಗಾಗಿ ಇಎಸ್‌ಐ ಆಸ್ಪತ್ರೆಗಳಲ್ಲಿ ಉಚಿತ ಮೆಡಿಕಲ್ ಸೀಟುಗಳನ್ನು ನೀಡಲಾಯಿತು. 10-15 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಯಿತು. ಇಬ್ಬರ ನೇತೃತ್ವದಲ್ಲಿ ಕಾರ್ಮಿಕರ ಜೀವನದಲ್ಲಿ ಬದಲಾವಣೆ ಪ್ರಾರಂಭವಾಯಿತು‌ ಎಂದು ತಿಳಿಸಿದರು.

ಕಾರ್ಮಿಕರ ಕಲ್ಯಾಣಕ್ಕಾಗಿ ಗ್ಯಾರಂಟಿ ಜಾರಿ:

ನಾವು ತಂದಿರುವ ಐದು ಗ್ಯಾರಂಟಿ ಯೋಜನೆಗಳು ಕಾರ್ಮಿಕರ, ಮಹಿಳೆಯರ ಹಾಗೂ ಜನಸಾಮಾನ್ಯರ ಪರವಾಗಿವೆ. ನಮ್ಮ ಗ್ಯಾರಂಟಿಗಳನ್ನು ಪ್ರಧಾನಿಯವರಿಂದ ಹಿಡಿದು ಬಿಜೆಪಿಯ ಎಲ್ಲರೂ ಟೀಕೆ ಮಾಡಿದರು. ಆದರೆ, ಟೀಕೆ ಮಾಡಿದವರೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬೇರೆ ಬೇರೆ ರಾಜ್ಯಗಳ ಚುನಾವಣೆ ವೇಳೆ ನಕಲು ಮಾಡಿದರು. ದೇಶದಲ್ಲಿ ಬೆಲೆ ಏರಿಕೆ ಆಗಿದ್ದರಿಂದ ನಮ್ಮ ಗ್ಯಾರಂಟಿ ಯೋಜನೆಗಳನ್ನು ಜನರ ಹಿತಕ್ಕಾಗಿ ಜಾರಿಗೆ ತರಲಾಯಿತು. 50 ಸಾವಿರ ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಪ್ರತಿ ವರ್ಷ ಖರ್ಚು ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಿಂಚಣಿ: ವಾರ್ಷಿಕ ಆದಾಯ ಮಿತಿ ₹1.20 ಲಕ್ಷಕ್ಕೇರಿಕೆ ಏರಿಕೆ
ಈ ಸಲ ಅಂಬಾರಿ ಹೊರಲು ದುಬಾರೆಯ ಧನಂಜಯ, ಪ್ರಶಾಂತ್ ಆನೆ ಪೈಪೋಟಿ!