ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ, ಜನರಿಗೆ ದ್ರೋಹ: ರಮೇಶ್‌ರಾಜು

KannadaprabhaNewsNetwork | Published : Mar 21, 2025 12:31 AM

ಸಾರಾಂಶ

ವಕ್ಫ್ ಕಲಿಯುಗದ ಭಸ್ಮಾಸುರನಂತಿದ್ದು, ಅಷ್ಟು ಅಧಿಕಾರವನ್ನು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ತಿದ್ದುಪಡಿಗಳ ಮೂಲಕ ನೀಡಿದೆ. ದೇಶದ ಇತರ ಸಂಘ-ಸಂಸ್ಥೆಗಳಿಗೆ ನೀಡಿದ ಅಧಿಕಾರವನ್ನು ಇದಕ್ಕೂ ನೀಡಬೇಕು. ಅದನ್ನು ಬಿಟ್ಟು ಇದನ್ನು ಪೋಷಣೆ ಮಾಡುವ ನಿರ್ಧಾರ ಏಕೆ ಎಂಬುದು ಸರ್ಕಾರ ತಿಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಬಾರದು ಎಂದು ಒತ್ತಾಯಿಸಲು ರಾಜ್ಯ ಸರ್ಕಾರ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿರುವುದು ರಾಜ್ಯದ ರೈತರಿಗೆ, ಜನತೆಗೆ ಮಾಡಿರುವ ದ್ರೋಹ ಎಂದು ಮಂಡ್ಯ ಜಿಲ್ಲೆ ವಕ್ಫ್ ವಿರೋಧಿ ರೈತ ಒಕ್ಕೂಟ ಅಧ್ಯಕ್ಷ ರಮೇಶ್ ರಾಜು ಆಕ್ರೋಶ ವ್ಯಕ್ತ ಪಡಿಸಿದರು.

ವಕ್ಫ್ ಕಾಯ್ದೆಯನ್ನು ವಿರೋಧಿಸಿದ ಸಲುವಾಗಿ ಕೇಂದ್ರ ಸರ್ಕಾರದ ತಿದ್ದುಪಡಿ ತರಲು ಮುಂದಾಗಿದ್ದು, ವಕ್ಫ್ ಕಾಯ್ದೆಗೆ ಹಿನ್ನಡೆಯಾಗಿದೆ ಎಂದು ತಿಳಿದಿದ್ದೆವು. ಆದರೆ ರಾಜ್ಯ ಸರ್ಕಾರದ ನಿರ್ಣಯ ವಿಪರ್ಯಾಸ ಮೂಡಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ಹಲವು ರೈತ ವಿರೋಧಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವುದೇ ರಾಜ್ಯ ಸರ್ಕಾರ ರೈತರ ಅನುಕೂಲಕರ ವ್ಯವಸ್ಥೆಗಳನ್ನು ಕಸಿದಿರಲಿಲ್ಲ, ಆದರೆ, ಈ ಸರ್ಕಾರ ರೈತರನ್ನು ಕಡೆಗಣಿಸಿ ವಕ್ಫ್ ಪರವಾಗಿ ನಿಂತಿದೆ ಎಂದು ಕಿಡಿ ಕಾರಿದರು.

ವಕ್ಫ್ ಕಲಿಯುಗದ ಭಸ್ಮಾಸುರನಂತಿದ್ದು, ಅಷ್ಟು ಅಧಿಕಾರವನ್ನು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ತಿದ್ದುಪಡಿಗಳ ಮೂಲಕ ನೀಡಿದೆ. ದೇಶದ ಇತರ ಸಂಘ-ಸಂಸ್ಥೆಗಳಿಗೆ ನೀಡಿದ ಅಧಿಕಾರವನ್ನು ಇದಕ್ಕೂ ನೀಡಬೇಕು. ಅದನ್ನು ಬಿಟ್ಟು ಇದನ್ನು ಪೋಷಣೆ ಮಾಡುವ ನಿರ್ಧಾರ ಏಕೆ ಎಂಬುದು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದ ಅವರು. ರಾಜ್ಯಪಾಲರು ರಾಜ್ಯ ಸರ್ಕಾರ ಕೈಗೊಂಡ ನಿರ್ಣಯಕ್ಕೆ ಅಂಕಿತ ಹಾಕಬಾರದು ಎಂದು ಒತ್ತಾಯಿಸಿದರು.

ವಕ್ಫ್ ಕಾಯ್ದೆಗೆ ನೀಡಿರುವ ಅಧಿಕಾರಗಳು ಸಂವಿಧಾನ ಹಾಗೂ ಕಾನೂನು ವಿರೋಧಿಯಾಗಿದ್ದು, ಇಡೀ ವಿಶ್ವದಲ್ಲಿಯೇ ಇರದ ಕಾನೂನಿನಿಂದ ದುಷ್ಪರಿಣಾಮಗಳಾಗುತ್ತಿದೆ. ಅವುಗಳನ್ನು ಅಂಬೇಡ್ಕರ್ ಸಂವಿಧಾನವ್ಯವಸ್ಥೆಯಡಿಗೆ ತರಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರಕ್ಕೂ ಪಿಎಫ್‌ಐ ಸಂಘಟನೆಗೂ ವ್ಯತ್ಯಾಸವಿರುವುದಿಲ್ಲ ಎಂದರು.

ಕದಂಬ ಸೇನೆಯ ಬೇಕ್ರಿ ರಮೇಶ್ ಮಾತನಾಡಿ, ಮಾ.೨೨ರ ಕರ್ನಾಟಕ ಬಂದ್‌ಗೆ ಮಂಡ್ಯ ಜಿಲ್ಲೆ ವಕ್ಫ್ ವಿರೋಧಿ ರೈತ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಮಂಡ್ಯದವರಿಗೆ ಅವಮಾನವಾಗುವಂತೆ ಹೇಳಿಕೆ ನೀಡಿದ್ದು, ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಅಪ್ಪಾಜಿ ಬೂದನೂರು, ಮೋಹನ್ ಚಿಕ್ಕಮಂಡ್ಯ, ಲಕ್ಷ್ಮೀ, ಪುಟ್ಟಮ್ಮ, ಹೊಳಲು ಶಿವಣ್ಣ, ಅಚ್ಯುತ, ದುಗೇಶ್ ಇದ್ದರು.

Share this article