ನವೆಂಬರ್‌ ಕ್ರಾಂತಿಯಲ್ಲಿ ಕಾಂಗ್ರೆಸ್‌ ಸರ್ಕಾರ ಬ್ಯುಸಿ: ಆರ್‌. ಅಶೋಕ್‌ ಲೇವಡಿ

KannadaprabhaNewsNetwork |  
Published : Aug 26, 2025, 01:05 AM IST
25ಎಚ್‌ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಮುರಿದು ಒಂದು ವರ್ಷ ಕಳೆದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹೊಸ ಗೇಟ್‌ ಅಳವಡಿಸಿಲ್ಲ.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿ ವೀಕ್ಷಿಸಿದ ವಿರೋಧ ಪಕ್ಷದ ನಾಯಕಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಮುರಿದು ಒಂದು ವರ್ಷ ಕಳೆದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹೊಸ ಗೇಟ್‌ ಅಳವಡಿಸಿಲ್ಲ. ಉಳಿದ 32 ಕ್ರಸ್ಟ್‌ ಗೇಟ್‌ಗಳು ಗಟ್ಟಿಯಾಗಿಲ್ಲ ಎಂದು ತಜ್ಞರೇ ವರದಿ ನೀಡಿದ್ದಾರೆ. ಹೀಗಿದ್ದರೂ ನವೆಂಬರ್‌ ಕ್ರಾಂತಿಯಲ್ಲೇ ಸರ್ಕಾರ ಬ್ಯುಸಿಯಾಗಿದ್ದು, ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಆರೋಪಿಸಿದರು.

ತುಂಗಭದ್ರಾ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿ ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂ ಕ್ರಸ್ಟ್‌ ಗೇಟ್‌ ನಿರ್ಮಾಣದತ್ತ ಸರ್ಕಾರ ಮನಸ್ಸು ಮಾಡಿಲ್ಲ. ಹಣ ಬಿಡುಗಡೆಯಾಗಿಲ್ಲ, ಹಣ ಬಿಡುಗಡೆಯಾಗದ್ದರಿಂದ ಟೆಂಡರ್ ಕರೆದು ಕೆಲಸ ಮಾಡಲು ಆಗಿಲ್ಲ. ಜಲಾಶಯ ರಕ್ಷಣೆ ದೃಷ್ಟಿಯಿಂದ 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ 188 ಟಿಎಂಸಿ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗಿದೆ. ಕಳಚಿ ಬಿದ್ದಿರುವ ಒಂದು ಗೇಟ್‌ ಅಲ್ಲ, ಎಲ್ಲಾ ಗೇಟ್‌ಗಳ ಆಯುಷ್ಯ ಮುಗಿದಿದೆ. ಎಲ್ಲಾ ಗೇಟ್‌ಗಳನ್ನು ಬದಲಾಯಿಸಬೇಕಿದೆ. ಇನ್ನೂ ಏಳು ಗೇಟ್‌ಗಳು ಕೂಡ ಜಾಂ ಆಗಿವೆ. ಹಾಗಾಗಿ ಗೇಟ್‌ಗಳ ನಿರ್ಮಾಣ ಕಾರ್ಯ ಶೀಘ್ರವೇ ಪೂರೈಸಬೇಕಿದೆ ಎಂದರು.

ಟಿಬಿ ಡ್ಯಾಂ ಗೇಟ್ ಬದಲಾವಣೆಗೆ ಕೇಂದ್ರ ಸರ್ಕಾರ ಸ್ಪಂದಿಸ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರಿಯಾದ ಸಮಯಕ್ಕೆ ಕೆಲಸ ಮಾಡದ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆಟ್ಟು ತೋರಿಸುತ್ತಿದೆ ಎಂದರು.

ತುಂಗಭದ್ರಾ ಜಲಾಶಯದ ಕಾರ್ಯದರ್ಶಿ ಆಂಧ್ರ ಪ್ರದೇಶದವರಾಗಿದ್ದಾರೆ. ಇದು ನಿಯಮದ ಉಲ್ಲಂಘನೆ ಆಗಿದೆ. ನೀರಿನ ಹಂಚಿಕೆ ಪಡೆಯದ ರಾಜ್ಯದವರು ಕಾರ್ಯದರ್ಶಿ ಆಗಬೇಕಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗಮನಕ್ಕೆ ಬಂದಿರಲಿಲ್ಲ. ಈಗ ಗಮನಕ್ಕೆ ಬಂದಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವರಾದ ಭೈರತಿ ಬಸವರಾಜ್, ಸುನೀಲ್ ಕುಮಾರ್, ಶಾಸಕರಾದ ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕರಾದ ಬಸವರಾಜ ದಡೆಸುಗೂರು, ಪರಣ್ಣ ಮುನವಳ್ಳಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಚನ್ನಬಸವನಗೌಡ ಮತ್ತಿತರರಿದ್ದರು.

ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ, ಅಧೀಕ್ಷಕ ಎಂಜಿನಿಯರ್‌ ನಾರಾಯಣ್ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಎಂ. ಶೃತಿ ಮತ್ತಿತರರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ