ಯಾವುದೇ ಹೊಸ ಸರ್ಕಾರದ ಮೊದಲ ಅಧಿವೇಶನ ಅಥವಾ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು.ಆದರೆ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಸಿದ್ಧಪಡಿಸಿದ್ದ ಭಾಷಣ ಸರಿಯಿರಲಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆರೋಪಿಸಿದ್ದಾರೆ.
ಮಡಿಕೇರಿ: ಯಾವುದೇ ಹೊಸ ಸರ್ಕಾರದ ಮೊದಲ ಅಧಿವೇಶನ ಅಥವಾ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು.ಆದರೆ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಸಿದ್ಧಪಡಿಸಿದ್ದ ಭಾಷಣ ಸರಿಯಿರಲಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಣದ 11 ಪ್ಯಾರಗಳನ್ನು ತೆಗೆಯುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೂ ಅದನ್ನು ತೆಗೆಯದೆ ಹಾಗೆ ಬಿಟ್ಟಿದ್ದರಿಂದ ಅವರು ಪೂರ್ತಿ ಭಾಷಣ ಓದಿಲ್ಲ. ಮೊದಲ ಮತ್ತು ಕೊನೆಯ ಪ್ಯಾರಾ ಓದಿ ಹೋಗಿದ್ದಾರೆ. ಆದರೆ ಬಿ.ಕೆ. ಹರಿಪ್ರಸಾದ್ ಹಾಗೂ ಬಾಲಕೃಷ್ಣ ಮುಂತಾದವರು ಸದನದಲ್ಲಿ ನಡೆದುಕೊಂಡಿರುವುದು ಸರಿಯಲ್ಲ ಎಂದರು.
ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ಅವರಿಗೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಅವರ ವಿರುದ್ಧ ಸ್ಪೀಕರ್ ಕೂಡಲೇ ಕ್ರಮ ಕೈಗೊಳ್ಳಬೇಕು. ನಾವು ಮಾಡಿರುವ ನಿಯಮಗಳನ್ನು ನಾವೇ ಉಲ್ಲಂಘಿಸಿದರೆ ಹೇಗೆ. ಇದು ಅಕ್ಷ್ಯಮ್ಯ ಅಪರಾಧ ಎಂದರು. ಬಿಜೆಪಿಗರು ಲಫಂಗಗಳು ಎಂಬ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಕ್ಕೆ ಉತ್ತರಿಸಿದ ಬೋಪಯ್ಯ, ಬಿ ಕೆ ಹರಿಪ್ರಸಾದ್ ಚರಿತ್ರೆ ಏನಿದೆ. ಹರಿಪ್ರಸಾದ್ ಎಂದರೆ ದೊಡ್ಡ ಕ್ರಿಮಿನಲ್ ಗೂಂಡಾ ಅಂತಲೇ ಹೆಸರು. ನಾವು ಹಾಗೆಯೇ ಹೇಳಬೇಕಾಗುತ್ತದೆ. ಈ ರೀತಿ ಅಸಂಬದ್ಧ ಹೇಳಿಕೆ ನೀಡುವುದು ಪರಿಷತ್ತಿಗೆ ಅಪಮಾನ ಎಂದು ಕಿಡಿಕಾರಿದರು. ಹೈ ಕಮಾಂಡ್ ನನ್ನ ಕೈಬಿಡುವುದಿಲ್ಲ ಎಂದು ದಾವೋಸ್ ನಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೋಪಯ್ಯ, ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ಇವರಿಬ್ಬರ ಕಿತ್ತಾಟ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಂಠಿತವಾಗಿದೆ. ಯಾವುದೇ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ.
ಯಾವ ಕಚೇರಿಗಳಿಗೆ ಹೋದರು ಯಾವ ಕೆಲಸಗಳು ಆಗದಂತೆ ಆಗಿವೆ ಎಂದು ದೂರಿದರು.ಇವರ ಡೊಂಬರಾಟದಿಂದ ಜನರಿಗೆ ತೊಂದರೆ ಆಗಿದೆ. ಯಾವುದೇ ಕೆಲಸಕ್ಕೆ ಹೋದರು ಲಕ್ಷಗಟ್ಟಲೆ ಲಂಚವಿದೆ ಎಂದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಇವರ ಕಿತ್ತಾಟದಿಂದ ಸರ್ಕಾರ ಎಲ್ಲಾ ಕಾರ್ಯಕ್ರಮಗಳು ಕುಂಠಿತವಾಗಿವೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಗೊತ್ತಿದೆ. ಮರ್ಡರ್ ಕೇಸಿನಲ್ಲಿ ಪೊಲೀಸರೇ ಇದ್ದಾರೆ. ಒಟ್ಟಿನಲ್ಲಿ ಇಡೀ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದರು.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಏನು ಒಪ್ಪಂದ ಮಾಡಿಕೊಂಡಿದ್ದಾರೋ ಅವೆಲ್ಲ ಅವರ ಆಂತರಿಕ ವಿಚಾರ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.