ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ, ಕೆಂಪಣ್ಣ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಯಲಿ
ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವೇ ಇಲ್ಲ. ಎಷ್ಟು ದಿನ ಇರುತ್ತೆ ಎಂಬುದು ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಎಲ್ಲ ಮಂತ್ರಿಗಳು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ಇದ್ದಾರೆ. ಸಿಎಂ ಹಾಗೂ ಅವರ ಮಗನದ್ದು ಇದರಲ್ಲಿ ಸಿಂಹ ಪಾಲಿದೆ ಎಂದು ನೇರ ಆರೋಪ ಮಾಡಿದರು.ಡಿ.ಕೆ. ಶಿವಕುಮಾರ್ ಮೇಲೆ ಗುತ್ತಿಗೆದಾರರ ಸಂಘದ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗಲೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಅಂತ ಹೇಳಿದ್ದೆ. ಡಿ.ಕೆ. ಶಿವಕುಮಾರ ಹೆಸರಲ್ಲಿ ಎಂಜಿನಿಯರ್ ಪ್ರಹ್ಲಾದ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಂಥವರು ಹಣ ಕೊಡುತ್ತಿದ್ದಾರೆ ಅಂತ ಹೇಳಿದ ಮೇಲೂ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದರು.
ಸಿಎಂ ಗದ್ದುಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ತಾವೇ ಮುಂದಿನ 5 ವರ್ಷ ಸಿಎಂ ಅಂದರು. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಡಿ.ಕೆ. ಶಿವಕುಮಾರ ಹೇಳುತ್ತಾರೆ. ಒಂದು ಕಡೆ ಇಷ್ಟು ದಿನ ಸಿದ್ದರಾಮಯ್ಯ ಪರ ಇದ್ದ ಕೆ.ಎನ್. ರಾಜಣ್ಣ ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಅಂದರು. ಪ್ರಿಯಾಂಕ್ ಖರ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಮುಖ್ಯಮಂತ್ರಿ ಅಂದರು. ಕಾಂಗ್ರೆಸ್‌ನಲ್ಲಿ ಎಷ್ಟು ಗುಂಪಿದೆ ಎಂಬುದೇ ಗೊತ್ತಿಲ್ಲ ಎಂದರು.
ತೀರ್ಥಹಳ್ಳಿ ಮೂಲದ ಮಹಿಳಾ ಅಧಿಕಾರಿ ಹತ್ಯೆ ವಿಚಾರಣೆಯಾದ ಬಳಿಕವೇ ಸತ್ಯಾಂಶ ಹೊರಬೀಳಲಿದೆ. ಹಾನಗಲ್ಲಿನಲ್ಲಿ ವಿಜಯದಶಮಿಯಂದು ಗಲಾಟೆಯಾಯಿತು. ಮಸೀದಿ ಎದುರು ಹೋಗಬಾರದಾ? ಪಲ್ಲಕ್ಕಿ ಹೋಗುತ್ತಿದ್ದಾಗ ಗಲಾಟೆ ಮಾಡಿದರು. ಹಾನಗಲ್ಲ ಪಾಕಿಸ್ತಾನದಲ್ಲಿ ಇದೆಯಾ? ಚುನಾವಣೆ ಸಮಯದಲ್ಲಿ ಸಚಿವ ಜಮೀರ್ ರಾಜಸ್ಥಾನಕ್ಕೆ ಹೋಗಿದ್ದರು. ಮುಲ್ಲಾಗಳು, ಮೌಲ್ವಿಗಳು ಕಾಂಗ್ರೆಸ್‌ಗೆ ವೋಟ್ ಕೊಡಬೇಕು ಅಂತ ನೇರವಾಗಿ ಕೋಮು ಪ್ರಚಾರ ಮಾಡಿದರು.