ಕನ್ನಡಪ್ರಭ ವಾರ್ತೆ ಹೊಸಪೇಟೆ
ಭೀಕರ ಬರಗಾಲಕ್ಕೆ ತುತ್ತಾಗಿರುವ ವಿಜಯನಗರ ಜಿಲ್ಲೆಯ ರೈತರಿಗೆ ಕರಡಿ, ಹಂದಿ, ಚಿರತೆಗಳ ಕಾಟ ಶುರುವಾಗಿದೆ.ಹಂದಿ, ಕರಡಿಗಳು ರೈತರ ಬೆಳೆಗಳನ್ನು ನಾಶ ಮಾಡಿದರೆ, ಚಿರತೆಗಳು ದನ, ಕುರಿಗಳ ಮೇಲೆ ದಾಳಿ ನಡೆಸುತ್ತಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ.
ನಗರದ ಜಂಬುನಾಥನಹಳ್ಳಿ ಗ್ರಾಮದ ರಾಯರಕೆರೆಯ ಕೃಷಿ ಭೂಮಿಗಳಿಗೆ ಕಳೆದ ಮೂರು ತಿಂಗಳಿಂದ ಚಿರತೆ, ಕರಡಿಗಳು ಲಗ್ಗೆ ಇಡುತ್ತಿವೆ. ಹೀಗಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಯಿಲ್ಲದೇ ಅರೆಬರೆ ಬೆಳೆದು ನಿಂತಿರುವ ಕಬ್ಬು, ಮೆಕ್ಕೆಜೋಳ, ಬಾಳೆ ಬೆಳೆಗಳನ್ನು ಕರಡಿ, ಹಂದಿಗಳು ಹಾಳು ಮಾಡುತ್ತಿವೆ. ಇದರ ನಡುವೆ ಆಗಾಗ ಪ್ರತ್ಯಕ್ಷವಾಗುವ ಚಿರತೆ ರೈತರ ದನ, ಕುರಿಗಳ ಮೇಲೆ ದಾಳಿ ಮಾಡುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಐದು ಕುರಿ, ನಾಲ್ಕು ನಾಯಿಗಳ ಮೇಲೆ ದಾಳಿ ನಡೆಸಿ ಚಿರತೆ ಕೊಂದು ಹಾಕಿದೆ.ರೈತರು ಹೊಲಗದ್ದೆಗಳಿಗೆ ಹೋಗದಂತಹ ಪರಿಸ್ಥಿತಿ ಎದುರಾಗಿದೆ. ಶನಿವಾರ ಹಾಡಹಗಲೆ, ಕಟಗಿ ವಸಂತಪ್ಪ ಎಂಬ ರೈತರ ಹಸುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿದೆ. ಈ ವೇಳೆ ಸ್ಥಳದಲ್ಲಿದ್ದ ಕಟಗಿ ಕರಿಹನುಮ ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲಿಂದ ಕಾಣೆಯಾದ ಚಿರತೆ ಮುಳ್ಳಿನ ಪೊದೆಯಲ್ಲಿ ಅಡಗಿ ಕುಳಿತಿದೆ ಎಂದು ಕರಿಹನುಮ ಗಾಬರಿಯಿಂದ ತಿಳಿಸಿದ್ದಾರೆ.
ಚಿರತೆ ಭೀತಿ:ನಗರದ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ನ್ಯಾಶನಲ್ ಕಾಲೇಜಿನ ಅನತಿ ದೂರದಲ್ಲಿ ಚಿರತೆ ಸುಳಿದಾಡುತ್ತಿದೆ. ಇದನ್ನು ಹೀಗೆ ಬಿಟ್ಟರೆ ನಗರ ಪ್ರವೇಶ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಘಟನೆ ಕುರಿತು ಅನೇಕ ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಕರೆ ಮಾಡಿದಾಗೊಮ್ಮೆ ನೆಪಮಾತ್ರಕ್ಕೆ ಸ್ಥಳಕ್ಕೆ ಭೇಟಿ ನೀಡುವ ಅರಣ್ಯ ಸಿಬ್ಬಂದಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುತ್ತಿದ್ದಾರೆ. ಒಮ್ಮೆಯೂ ಚಿರತೆ ಸೆರೆಗೆ ಬೋನ್ ಇರಿಸಲು ಇಲಾಖೆ ಮುಂದಾಗಿಲ್ಲ ಎಂಬುದು ರೈತರ ಆರೋಪ.
ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮುಂದಾಗಬೇಕು. ರಾಯರ ಕೆರೆಯಲ್ಲಿ ಹೆಚ್ಚಾಗಿರುವ ಕರಡಿ, ಚಿರತೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.ಊರುಗಳತ್ತ ಕಾಡುಪ್ರಾಣಿಗಳು:
ಮಳೆ ಕೊರತೆಯಿಂದ ಆಹಾರ ಸಿಗದೇ ಕಾಡುಪ್ರಾಣಿಗಳು ರೈತರ ಹೊಲ, ಗದ್ದೆಗಳಿಗೆ ಲಗ್ಗೆ ಇಡುತ್ತಿವೆ. ದನಕರು, ಕುರಿ, ಮೇಕೆ ಹಾಗೂ ನಾಯಿಗಳ ಮೇಲೆ ದಾಳಿ ನಡೆಸುತ್ತಿವೆ. ರೈತರು ಹೊಲಗಳಿಗೆ ನೀರು ಹಾಯಿಸಲು ನಸುಕಿನಲ್ಲಿ ಮತ್ತು ಸಂಜೆ ಹೊತ್ತು ಹೋಗುವುದು ಬರುವುದು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕಾಡುಪ್ರಾಣಿಗಳು ಜನರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಕುರಿತು ಅರಣ್ಯ ಇಲಾಖೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.ಚಿರತೆ ಕಾಟ:ಹೊಸಪೇಟೆಯ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ನ್ಯಾಶನಲ್ ಕಾಲೇಜಿನ ಅನತಿ ದೂರದಲ್ಲಿ ಚಿರತೆ ಸುಳಿದಾಡುತ್ತಿದೆ. ಇದನ್ನು ಹೀಗೆ ಬಿಟ್ಟರೆ ನಗರ ಪ್ರವೇಶ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ರೈತ ಕಟಗಿ ಕರಿಹನುಮ.