- ರೈತ ಭವನದಲ್ಲಿ ಟಿಎಪಿಸಿಎಂಎಸ್‌ನ ಸಹಕಾರಿ ಮತದಾರರು, ಕಾರ್ಯಕರ್ತ ಬಂಧುಗಳಿಗೆ ಅಭಿನಂದನಾ ಸಮಾರಂಭ
ಕಾಂಗ್ರೆಸ್ ಸರಕಾರದ ಜನ ವಿರೋಧಿ ಆಡಳಿತದಿಂದಾಗಿ ಯಾವುದೇ ಸ್ಥಳೀಯ ಚುನಾವಣೆ ನಡೆದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಜನರು ಸೋಲಿಸಲಾರಂಭಿಸಿದ್ದಾರೆಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಮಂಗಳವಾರ ಪಟ್ಟಣದ ರೈತ ಭವನದಲ್ಲಿ ಟಿಎಪಿಸಿಎಂಎಸ್‌ನ ಸಹಕಾರಿ ಮತದಾರರು, ಕಾರ್ಯಕರ್ತ ಬಂಧುಗಳಿಗೆ, ಚುನಾಯಿತ ಪ್ರತಿನಿಧಿಗಳು ಮತ್ತು ಎನ್‌ಡಿಎ ಮೈತ್ರಿಕೂಟದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬಹು ನಿರೀಕ್ಷೆಯಿಂದ ರಾಜ್ಯದ ಜನರು ಕಾಂಗ್ರೆಸ್‌ಗೆ ಆಡಳಿತ ಕೊಟ್ಟಿದ್ದಾರೆ. ಆದರೆ, ಅಭಿವೃದ್ಧಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಸರ್ಕಾರಕ್ಕೆ ಬಂದೊದಗಿದೆ. ಇದರಿಂದ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಶಪಥ ಮಾಡಿದ್ದಾರೆ. ಇದೊಂದು ಎಲ್ಲಾ ಜನಪ್ರತಿನಿಧಿಗಳಿಗೆ ಪಾಠವಾಗುವುದರಿಂದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆದ್ದ ನಿರ್ದೇಶಕರು ಜನಪರ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ರಾಜ್ಯದ ಜನತೆ ತೆರಿಗೆ ಹಣವನ್ನು ಎಲ್ಲಿ ಬಚ್ಚಿಟ್ಟಿದ್ದೀರೆಂದು ರಾಜ್ಯದ ಜನರಿಗೆ ಉತ್ತರ ನೀಡಬೇಕೆಂದು ಒತ್ತಾಯಿಸಿದ ಅವರು, ಕೃಷಿಯಲ್ಲಿ ಸಾಧನೆ ಮಾಡಿ ಅಧಿಕ ಆದಾಯ ಪಡೆಯುತ್ತಿರುವ ಅದೆಷ್ಟೋ ರೈತರು ನಾವಿಂದು ಕಾಣುತ್ತಿದ್ದೇವೆ. ಅವರಂತೆ ಎಲ್ಲಾ ರೈತರು ಕೃಷಿಯಲ್ಲಿ ಸಾಧನೆ ಮಾಡಬೇಕು. ಕಷ್ಟವಿದೆ ಎಂಬ ಕಾರಣಕ್ಕೆ ಯಾರೂ ಕೃಷಿ ಭೂಮಿ ಮಾರಾಟ ಮಾಡಬಾರದು. ಮುಂದಿನ ದಿನದಲ್ಲಿ ಮಣ್ಣಿನ ಮಕ್ಕಳದ್ದೇ ರಾಜ್ಯಭಾರ ನಡೆಯುತ್ತದೆ. ಪ್ರಕೃತಿ ಉಳಿಸುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಕೃಷಿ ಪತ್ತಿನ ಸಂಘಗಳು ಕಾಫಿ ಮಂಡಳಿ ಅಧ್ಯಕ್ಷ ರೈತರಿಗೆ ಅನುಕೂಲ ವಾಗುವ ಕಾರ್ಯ ಮಾಡಬೇಕು. ಮುಂದಿನ ದಿದನಲ್ಲಿ ಕಾಫಿ ಕಲ್ಪವೃಕ್ಷವಾಗಿ ಪರಿವರ್ತನೆಗೊಳ್ಳಲಿದೆ. ಗುಣ ಮಟ್ಟದ ಕಾಫಿಗೆ ಆಧ್ಯತೆ ನೀಡಬೇಕು. ಬೇರೆ ರಾಜ್ಯದಲ್ಲಿ ಇಲ್ಲದ ಸರ್ಫೇಸಿ ನಮ್ಮ ರಾಜ್ಯದಲ್ಲಿ ಏಕಿದೆ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದನ್ನು ಬಗೆಹರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮಣ್‌ಗೌಡ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಜಿ.ಕೆ.ದಿವಾಕರ್, ನಿರ್ದೇಶಕಿ ಎ.ಕೆ.ಭಾರತೀ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಲ್.ಕಲ್ಲೇಶ್, ಉಪಾಧ್ಯಕ್ಷ ಕೆ.ಬಿ.ಗಣೇಶ್, ಮುಖಂಡರಾದ ಜ್ವಾಲನಯ್ಯ ಕಳಸ, ಎಂ.ಆರ್.ಜಗದೀಶ್, ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಬಿ.ಎನ್. ಜಯಂತ್, ಮನೋಜ್ ಹಳೆಕೋಟೆ, ಡಿ.ಬಿ.ಅಶೋಕ್, ಎಂ.ಸಿ.ಹೂವಪ್ಪ ಸೇರಿದಂತೆ ಎನ್‌ಡಿಎ ಮುಖಂಡರು ಟಿಎಪಿಸಿಎಂಎಸ್ ನಿರ್ದೇಶಕರು ಉಪಸ್ಥಿತರಿದ್ದರು. 23 ಮೂಡಿಗೆರೆ 1ಎ; ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಮಂಗಳವಾರ ಎನ್‌ಡಿಎ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು.