ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅವುಗಳನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲಗೊಂಡಿದ್ದು, ಅಧಿಕಾರಕ್ಕೆ ಬಂದ ಎಂಟೇ ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಂತಹ ಸರ್ಕಾರ ಯಾವುದಾದರು ಇದ್ದರೆ ಅದು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.ಸ್ಥಳೀಯ ಪಕ್ಷದ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳು ಹುಸಿಯಾಗಿವೆ. ಸುಳ್ಳುಗಳ ಮುಖಾಂತರ ಅಧಿಕಾರಕ್ಕೆ ಬಂದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸದೆ ಬರೀ ಪ್ರಚಾರದಲ್ಲಿ ಮುಳುಗಿದ್ದು, ಜನರ ವಿಶ್ವಾಸವನ್ನು ಗಾಳಿಗೆ ತೂರಿದೆ ಎಂದು ಟೀಕಿಸಿದರು.
ಉಚಿತ ಬಸ್ ಪ್ರಯಾಣದಿಂದಾಗಿ ಸಿಬ್ಬಂದಿಗೆ ಸಂಬಳ ನೀಡಲು ಆಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಾಗಿದೆ. 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದವರಿಗೆ 1 ಕೆ.ಜಿ ಕೊಡಲು ಸಹ ಆಗುತ್ತಿಲ್ಲ. 200 ಯುನಿಟ್ ಕರೆಂಟ್ ಯಾರಿಗೆ ಕೊಡುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ. ಬರಗಾದಲ್ಲಿ 7 ತಾಸು ವಿದ್ಯುತ್ ಕೊಡುವಲ್ಲಿ ಕಾಂಗ್ರೆಸ್ ಸೋತಿದ್ದು, 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಸಹ ಬರಪರಿಹಾರದ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆಕೂಡಿಸುವ ಕೆಲಸ ಮಾಡುತ್ತಿದೆ. ಎನ್‌ಡಿಆರ್‌ಎಫ್ ನಿಯಮದಂತೆ ಕೇಂದ್ರದಿಂದ ಬರಪರಿಹಾರ ಬರಲಿದ್ದು, ಕೇಂದ್ರದ ಮೇಲೆ ಅವಲಂಭಿತರಾಗದೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಿ, ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಹೋರಾಟಕ್ಕೆ 500 ವರ್ಷದ ಇತಿಹಾಸವಿದೆ. ದೇಶದ ಜನರ ಕನಸ್ಸನ್ನು ಪ್ರಧಾನಿ ಮೋದಿ ಸಹಕಾರ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿಚಾರಗಳಿಗೆ ಧಕ್ಕೆ ತರುವ ಕಾರ್ಯಕ್ಕೆ ಮುಂದಾಗಿದೆ. ಹುಬ್ಬಳ್ಳಿಯಲ್ಲಿ ಕರಸೇವನಕ ಬಂಧನ, ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ಗಲಾಟೆಯನ್ನು ನಡೆಸಿದೆ. ಅಲ್ಲಿಯ ಗ್ರಾಪಂ ನಿರ್ಧರಿಸಿದ 108 ಅಡಿ ಎತ್ತರದ ಧ್ವಜ ಸ್ತಂಭ ಸ್ತಾಪಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಪೊಲೀಸರನ್ನು ಕಳುಹಿಸಿ ಧ್ವಜ ಇಳಿಸೋ ದುಸ್ಸಾಸಹಕ್ಕೆ ಮುಂದಾಗಿರುವುದನ್ನು ಖಂಡಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪ ನೆತ್ತಿಗೇರಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡದೇ ಕಾನೂನು ಹದಗೆಡಿಸುತ್ತಿರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಇಂತಹ ದೌರ್ಜನ್ಯದ ಆಡಳಿತವನ್ನು ನಿಲ್ಲಿಸಬೇಕು, ಹುಡುಗಾಟ ಮಾಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಮೋದಿ ಆಡಳಿತಕ್ಕೆ ಮೆಚ್ಚಿ ಜಗದೀಶ ಶೆಟ್ಟರ್ ಮರಳಿ ಬಿಜೆಪಿಗೆ ಬಂದಿದ್ದಾರೆ. ಪ್ರಧಾನಿ ಆಡಳಿತ ಮೆಚ್ಚಿ ಯಾರೇ ಬಂದರೂ ಅವರನ್ನು ಸ್ವಾಗತಿಸಲಾಗುವುದು. ಶಾಸಕ ಜನಾರ್ಧನರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿವೈವಿ, ಈ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕ ಡಾ.ಶಿವರಾಜ ಪಾಟೀಲ್, ಪಿ.ರಾಜು, ಬಿ.ವಿ.ನಾಯಕ, ಕೆ.ಕರಿಯಪ್ಪ ಸೇರಿ ಮುಖಂಡರು ಇದ್ದರು.