ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದರಿಂದ ಹೆಚ್ಚು ರೈತರು ಗುಳೇ ಹೋಗುತ್ತಿದ್ದಾರೆ. ಆದರೂ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಇದು ಆಳುವ ಸರ್ಕಾರದ ನಿರ್ಲಕ್ಷ್ಯತನದ ಪ್ರತಿಬಿಂಬ ಎಂದು ದೂರಿದರು.
ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯಬಿಟ್ಟು ಕಾವೇರಿ ಕೊಳ್ಳದ ರೈತರ ಬದುಕನ್ನು ದುರ್ಬಲಗೊಳಿಸಿದೆ. ಕಾವೇರಿಯನ್ನೇ ನಂಬಿಕೊಂಡಿರುವ ಮೈಸೂರು - ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಪರದಾಡುವ ಸನ್ನಿವೇಶ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುತ್ತಾ ಬಂದಿದೆ. ಟ್ಯಾಂಕರ್ ನೀರಿನ ಮಾಫಿಯಾಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನೀರಿನ ದರವನ್ನು ದುಪ್ಪಟ್ಟು ಮಾಡಿದ ಪರಿಣಾಮ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜಾಗದಂತೆ ಮಾಡಿ ಉದ್ಯಮಗಳು ಬಾಗಿಲು ಮುಚ್ಚಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತರು, ಶೋಷಿತ ವರ್ಗದವರ ಕುರಿತು ಸಿದ್ದರಾಮಯ್ಯನವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಪರೋಕ್ಷವಾಗಿ ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲೆ ನಿರಂತರ ಅನ್ಯಾಯ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯಲ್ಲಿ ಒಂದು ಭಾಗವನ್ನೂ ಕೂಡ ಕಾಂಗ್ರೆಸ್ ಸರ್ಕಾರ ತನ್ನ 70 ವರ್ಷಗಳ ಆಡಳಿತದಲ್ಲಿ ಮಾಡಲಾಗಿಲ್ಲ ಎಂದರು.
ಹಾಲಿನ ದರ, ಅಬಕಾರಿ ಸುಂಕ, ಆಸ್ತಿ ನೋಂದಣಿ ಶುಲ್ಕ, ವಾಹನ ನೋಂದಣಿ ಶುಲ್ಕ ಸೇರಿ ಜನರಿಗೆ ಅಗತ್ಯವಿರುವ ಎಲ್ಲ ಸೇವೆಗಳಿಗೂ ದುಪ್ಪಟ್ಟು ದರ ಹೆಚ್ಚಿಸಿರುವ ಸರ್ಕಾರದಿಂದ ಜನಸಾಮಾನ್ಯರು ಬವಣೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಕಳೆದ ವಿಧಾನ ಸಭಾ ಬಜೆಟ್ ಅಧಿವೇಶನದಲ್ಲಿ ಯಾವುದೇ ಜನಪರ ಚರ್ಚೆಗಳನ್ನು ಮಾಡದೆ ಸಮಯ ವ್ಯರ್ಥ ಮಾಡಿ ಜನತೆಯ ತೆರಿಗೆ ಹಣ ಪೋಲು ಮಾಡಿದ್ದು ಈ ಸರ್ಕಾರದ ಸಾಧನೆಯಾಗಿದೆ ಎಂದು ಕಿಡಿಕಾರಿದರು.