ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಮಟ್ಟದ 4ನೇ ಬೃಹತ್ ರೈತ ಜನ ಜಾಗೃತಿ ಸಮಾವೇಶವನ್ನು ಮೇ 8 ರಂದು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿ ಮಾಡೋಣ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ರೈತ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸುಮಾರು 10-15 ಸಾವಿರ ರೈತರೆಲ್ಲರೂ ಸೇರಿಕೊಂಡು 4ನೇ ಬೃಹತ್ ರೈತ ಜನ ಜಾಗೃತಿ ಸಮಾವೇಶವನ್ನು ನಗರದ ದರಬಾರ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ಇಲ್ಲಿ ಹಲವಾರು ಕೃಷಿ ತಜ್ಞರು, ವಿಜ್ಞಾನಿಗಳು, ರೈತ ಮುಖಂಡರು ಕೃಷಿ ಕುರಿತು ಚಿಂತನೆ, ಅಭಿಪ್ರಾಯ ಮಂಡನೆ ಮಾಡುತ್ತಿದ್ದು, ಜೊತೆಗೆ ಕೃಷಿಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ವಿನೂತನವಾಗಿ ಸಾಧನೆ ಮಾಡಿದ ಸಾಧಕರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.ಜಿಲ್ಲೆಯ 13 ತಾಲೂಕಿನ ಪ್ರತಿಯೊಂದು ಹಳ್ಳಿಯ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು, ಸೇರಿದಂತೆ ಎಲ್ಲ ಪ್ರತಿಪರ ಸಂಘಟನೆಯವರು ಕೂಡಾ ಮುಕ್ತವಾಗಿ ಪಾಲ್ಗೊಳುತ್ತಿದ್ದಾರೆ. ಈ ಕುರಿತು ಪತ್ರಿಕೆ, ದೃಶ್ಯಮಾಧ್ಯಮ, ಸಮೂಹ ಮಾಧ್ಯಮ, ಬ್ಯಾನರ, ಸ್ಟೀಕರ್, ಕರಪತ್ರ ಸೇರಿದಂತೆ ಹಳ್ಳಿಗಳಿಗೆ ವಾಹನಗಳ ಮೂಲಕ ಧ್ವನಿ ವರ್ಧಕ ಹಚ್ಚಿ ಪ್ರಚಾರ ಮಾಡಿ ಜಿಲ್ಲೆಯ ಸಮಸ್ತ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳುವಂತೆ ಸಂದೇಶ ಮುಟ್ಟಿಸುವ ಜವಾಬ್ದಾರಿ ಎಲ್ಲರೂ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸುಕ್ಷೇತ್ರ ಮುಗಳಖೋಡ ಜಿಡಗಾದ ಪ.ಪೂ ಷಡಕ್ಷರಿ ಶಿವಯೋಗಿ ಡಾ.ಮುರಘರಾಜೇಂದ್ರ ಮಹಾಸ್ವಾಮಿಗಳು, ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು ಹಾಗೂ ಬೆಳಗಾವಿಯ ಸುವರ್ಣತಾಯಿ ಹೊಸಮಠ ಪಾವನ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ರೈತ ಮುಖಂಡರು, ಪ್ರಗತಿಪರ ಸಮಾನ ಮನಸ್ಕರು, ರೈತಪರ ಚಿಂತಕರು, ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ನಾಡಿನ ಸಮಸ್ತ ರೈತ ಬಾಂಧವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಈ ಸಮಾವೇಶದಲ್ಲಿ ಆಲಿಮಟ್ಟಿಯ ಜಲಾಶಯದ ಎತ್ತರ 524.256ಕ್ಕೆ ಎತ್ತರಿಸಿ ಅದಕ್ಕೆ ಬೇಕಾಗುವ ಹಣವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರ ಕೊಟ್ಟು, ಪುರ್ನವಸತಿ ಹಾಗೂ ಪರಿಹಾರವನ್ನು ಬಿಡುಗಡೆ ಮಾಡಲೇ ಬೇಕು ಎಂದು ಆಗ್ರಹಿಸಲು ಸಂಬಂಧಿಸಿದ ನೆರೆಯ ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ರಾಯಚೂರ ಸೇರಿದಂತೆ ಇತರೆ ಜಿಲ್ಲೆಯ ಪ್ರತಿಯೊಂದು ತಾಲೂಕು, ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿ ರೈತರನ್ನು ಸೇರಿಸಿ ಹೋರಾಟದ ರೂಪರೇಷ ಮಾಡಲು ಲಕ್ಷಾಂತರ ರೈತರೊಂದಿಗೆ ಪಾದಯಾತ್ರೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸಲು ಮುಕ್ತವಾಗಿ ಎಲ್ಲರೊಂದಿಗೆ ಮುಕ್ತ ಹಾಗೂ ಗಟ್ಟಿ ಹೋರಾಟ ಪ್ರಾರಂಭ ಮಾಡಲು ಈ ವೇದಿಕೆ ಮೂಲಕ ಚಾಲನೆ ನೀಡಲಾಗುವುದು ಎಂದರು.ಇದೇ ವೇಳೆ ಮುಖಂಡರಾದ ಶಾಂತಗೌಡ ಪಾಟೀಲ, ಸೋಮು ಬಿರಾದಾರ, ಶ್ರೀಶೈಲ ವಾಲಿಕಾರ, ಸಾತಲಿಂಗಯ್ಯ ಸಾಲಿಮಠ, ಮಹಾಂತಗೌಡ ಬಿರಾದಾರ, ಶಿವಾನಂದ ಹಿರೇಮಠ, ದಯಾನಂದ ಕೋಳಿ, ಮುಕುಬುಲ್ ಕೀಜಿ, ಡಾ.ಕೆಂ.ಎ.ಗುಡ್ನಾಳ, ಮಾಳು ಪೂಜಾರಿ, ಅನಮೆಶ ಜಮಖಂಡಿ, ಮುದಕಣ್ಣ ಹೊರ್ತಿ, ಸುಜಾತಾ ಅವಟಿ, ಚೆನ್ನಮ್ಮ ಮೈತ್ರಿ, ರೇಣುಕಾ ಬಿರಾದಾರ, ನಿಲಾಂಬಿಕಾ ಕಟ್ಟಿಮನಿ, ಪ್ರಕಾಶ ತೇಲಿ, ಸಂಗಪ್ಪ ಟಕ್ಕೆ, ಶಂಕರಗೌಡ ಬಿರಾದಾರ, ಸಲೀಂ ಮಾಶ್ಯಾಳ, ಧರೆಪ್ಪ ಅನಂತಪುರ, ರಾಜುಗೌಡ ಬಿರಾದಾರ, ಗುರುನಾಥ ಬಿರಾದಾರ, ಸತೀಶ ದಾಸ್ಯಾಳ, ಗುರುಪಾದ ಹಿಪ್ಪರಗಿ, ಹಣಮಂತ ಬ್ಯಾಡಗಿ, ಸೇರಿದಂತೆ 13 ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.