ಕಾಂಗ್ರೆಸ್‌ ಸರ್ಕಾರದಿಂದ ಜನರ ಖಾತೆಗೆ ₹ 3 ಲಕ್ಷ ಕೋಟಿ ಹಣ ಜಮೆ: ಲಾಡ್‌

KannadaprabhaNewsNetwork | Published : Jul 4, 2025 11:47 PMUpdated   : Jul 05 2025, 12:27 PM IST
4ಎಚ್‌ಪಿಟಿ1- ಹೊಸಪೇಟೆಯಲ್ಲಿ ನಡೆದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಫಲಾನುಭವಿಗಳಿಗೆ ಚೆಕ್‌ ವಿತರಿಸಿದರು. ಶಾಸಕ ಎಚ್.ಆರ್‌. ಗವಿಯಪ್ಪ ಮತ್ತಿತರರಿದ್ದರು. | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರ ಐದು ವರ್ಷದ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ₹3 ಲಕ್ಷ ಕೋಟಿ ನೇರ ಫಲಾನುಭವಿಗಳ ಖಾತೆಗೆ ಹಣ ಒದಗಿಸುತ್ತಿದೆ.

 ಹೊಸಪೇಟೆ :  ರಾಜ್ಯದ ಕಾಂಗ್ರೆಸ್‌ ಸರ್ಕಾರ ಐದು ವರ್ಷದ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ₹3 ಲಕ್ಷ ಕೋಟಿ ನೇರ ಫಲಾನುಭವಿಗಳ ಖಾತೆಗೆ ಹಣ ಒದಗಿಸುತ್ತಿದೆ. ರಾಜ್ಯದಲ್ಲಿ ವಿವಿಧ ವಲಯದ 91 ವರ್ಗಗಳ 35 ಲಕ್ಷ ಕಾರ್ಮಿಕರನ್ನು ಗುರುತಿಸಿ, ಸ್ಮಾರ್ಟ್ ಕಾರ್ಡ್ ಒದಗಿಸಲಾಗುತ್ತಿದ್ದು, ಜನರ ದುಡ್ಡನ್ನು ಜನರಿಗೆ ನೀಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್‌ ಆವರಣದಲ್ಲಿ ಶುಕ್ರವಾರ ನಡೆದ ವಿಜಯನಗರ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ರಾಜ್ಯದಲ್ಲಿ ಆರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗಿತ್ತು. ಹೊಸದಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಗಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟು 91 ವರ್ಗಗಳ ಕಾರ್ಮಿಕರನ್ನು ಗುರುತಿಸಿ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿಗಳ ಪರವಾಗಿದ್ದಾರೆ. ಅದಾನಿ, ಅಂಬಾನಿಗಳ ಜೇಬು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿ ಏಕೆ ಹಿಂದೆ ಬಿದ್ದಿದೆ? ಜಿಯೋ ಕಂಪನಿ ಏಕೆ ಓಡುತ್ತಿದೆ. ಕೇಂದ್ರ ಸರ್ಕಾರ ಜಿಡಿಪಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ. ಸುಮಾರು 23 ಪಿಎಸ್‌ಯು ಸಂಸ್ಥೆಗಳು ದಿವಾಳಿ ಆಗಿವೆ. ಭಾರತ ಬಲಿಷ್ಠವಾಗಿದೆ. ಜಗತ್ತಿನಲ್ಲೇ ಮೂರನೇ ಸ್ಥಾನಕ್ಕೆ ಹೋಗುತ್ತಿದೆ ಎಂದು ಬಡಾಯಿ ಕೊಚ್ಚಿಕೊಳ್ಳಲಾಗುತ್ತಿದೆ. ಚಿನ್ನದ ರೇಟು ಎಷ್ಟಿದೆ. ಡಾಲರ್‌ ರೇಟು ಎಷ್ಟಿದೆ. ಅಮೆರಿಕದ ಜನಸಂಖ್ಯೆ ಎಷ್ಟಿದೆ. ಅದರ ತಲಾ ಆದಾಯ ಎಷ್ಟಿದೆ. ಭಾರತದ ಜಿಡಿಪಿ ಎಷ್ಟಿದೆ ಗಮನಿಸಿ, ಸುಮ್ಮನೆ ಹೇಳುವುದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ರಸ್ತೆ ಅಪಘಾತದಿಂದ ಭಾರಿ ಅನಾಹುತವಾಗುತ್ತಿದೆ. ದೇಶದ ಜಿಪಿಡಿಗೂ ಹೊಡೆತ ಬೀಳುತ್ತಿದೆ. ಕುಟುಂಬಗಳು ಕೂಡ ಬೀದಿಗೆ ಬೀಳುತ್ತಿವೆ. ಇದನ್ನು ಪರಿಗಣಿಸಿ ಈಗ ನಾವು ಒಂದು ಲಕ್ಷ ಪರಿಹಾರ ಕೊಡಿಸುತ್ತಿದ್ದೇವೆ. ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕೆ ₹50 ಸಾವಿರ, ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ ₹10 ಸಾವಿರ ಧನ ಸಹಾಯ ನೀಡಲಾಗುತ್ತದೆ. ಅಷ್ಟೇ ಅಲ್ಲದೇ 2024ರಲ್ಲಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ರೂಪಿಸಿ ಅಧಿನಿಯಮ ಜಾರಿಗೊಳಿಸಿ 20 ವರ್ಗಗಳನ್ನು ಗುರುತಿಸಿ ಸೌಲಭ್ಯ ನೀಡಲಾಗಿದೆ ಎಂದರು.

ಅಪಘಾತದಿಂದ ಫಲಾನುಭವಿ ನಿಧನರಾದರೇ ₹5 ಲಕ್ಷ ಪರಿಹಾರ, ಶಾಶ್ವತ ದುರ್ಬಲತೆ ಹೊಂದಿದರೇ ₹2 ಲಕ್ಷವರೆಗೆ ಪರಿಹಾರ, ತಾತ್ಕಾಲಿಕ ದುರ್ಬಲತೆ ಹೊಂದಿದರೇ ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕಾಗಿ ₹1 ಲಕ್ಷವರೆಗೆ ಪರಿಹಾರ, ಮೃತರ ಕುಟುಂಬದ ಇಬ್ಬರು ಮಕ್ಕಳಿಗೆ 1 ರಿಂದ ಪದವಿವರೆಗೆ ತಲಾ ₹10 ಸಾವಿರ ನೀಡಲಾಗುತ್ತಿದೆ ಎಂದರು.

ಪೆಟ್ರೋಲ್ ಮತ್ತು ಡಿಸೇಲ್‌ನಿಂದ ರಾಜ್ಯಕ್ಕೆ ಬರುವ ತೆರಿಗೆ ಸಂಗ್ರಹದಲ್ಲಿ ಕನಿಷ್ಟ ಶೇ.1 ರಷ್ಟು ಹಣ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಬಳಿ ಆಗ್ರಹಿಸಲಾಗಿದೆ. ಹಾಗೇನಾದರೂ ಒಪ್ಪಿಗೆ ನೀಡಿದರೇ ₹2200 ಕೋಟಿ ಸಂಗ್ರಹವಾಗಲಿದೆ. ಅದನ್ನು ನೇರವಾಗಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಳ್ಳಾರಿ ಮತ್ತು ವಿಜಯನಗರ ಸಂಸದ ಈ. ತುಕಾರಾಂ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಎರಡನೇ ದೇವರಾಜ್ ಅರಸು ಇದ್ದಂತೆ, ಕಾರ್ಮಿಕ ಸಚಿವ ಸಂತೋಷ ಲಾಡ್ ಕಾಯಕಯೋಗಿ ಆಗಿದ್ದಾರೆ ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಹಿಡಿದ ಕೆಲಸವನ್ನು ಛಲದಿಂದ ಮಾಡುವ ಪ್ರವೃತ್ತಿ ಲಾಡ್ ಅವರದ್ದು, ಕೇಂದ್ರದ ವಿಪಕ್ಷಗಳು ಮತ್ತು ಪ್ರಧಾನ ಮಂತ್ರಿ ವಿರುದ್ಧವಾಗಿ ಮಾತನಾಡುವ ಗತ್ತು ಇರುವ ಏಕೈಕ ಸಚಿವ ಸಂತೋಷ ಲಾಡ್ ಆಗಿದ್ದಾರೆ. ಅವರ ಎಲ್ಲ ಕೆಲಸಗಳಿಗೆ ನನ್ನ ಬೆಂಬಲವಿದೆ ಎಂದರು.

ಶಾಸಕಿ ಎಂ.ಪಿ. ಲತಾ ಮಾತನಾಡಿ, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಅನೇಕ ಯೋಜನೆ ರೂಪಿಸಿದೆ. ಕಾರ್ಮಿಕ ಸಚಿವರು ಹೆಚ್ಚಿನ ಹಿತಾಸಕ್ತಿಯಿಂದ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್‌, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತಾ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಂ ಅಲಿ ಷಾ, ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಕಾರ್ಮಿಕ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಜಂಟಿ ಆಯುಕ್ತ ಡಾ. ಎಸ್.ಬಿ. ರವಿಕುಮಾರ್, ಕಲಬುರಗಿ ಉಪಕಾರ್ಮಿಕ ಆಯುಕ್ತ ಡಾ. ವೆಂಕಟೇಶ್ ಶಿಂದಿಹಟ್ಟಿ, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ ನಾಯ್ಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಈ. ದೊಂಬರ ಮತ್ತೂರು ಸೇರಿದಂತೆ ವಿವಿಧ ಮುಖಂಡರು, ನಗರಸಭೆ ಸದಸ್ಯರು ಇದ್ದರು.

PREV
Read more Articles on