ಕಾಮಗಾರಿ ನೀಡದೇ ನಿರುದ್ಯೋಗಿಯಾಗಿಸಿದೆ ಕಾಂಗ್ರೆಸ್‌ ಸರ್ಕಾರ

KannadaprabhaNewsNetwork |  
Published : Aug 31, 2024, 01:32 AM IST
ತುಮಕೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರ ಸಮಾಲೋಚನಾ ಸಭೆಯಲ್ಲಿ ರಾಜ್ಯ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರದ ಅಭಿವೃದ್ದಿ ಕಾಮಗಾರಿಗಳಲ್ಲಿ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರಿಗೆ 1 ಕೋಟಿ ರು.ವರೆಗಿನ ಮೀಸಲಾತಿ ಪ್ರಕಟಿಸಿರುವ ರಾಜ್ಯ ಸರ್ಕಾರ, ಕಳೆದ ಒಂದೂವರೆ ವರ್ಷದಿಂದ ಈ ವರ್ಗದವರಿಗೆ ಒಂದೇ ಒಂದು ಗುತ್ತಿಗೆ ಕಾಮಗಾರಿ ನೀಡದೆ ನಿರುದ್ಯೋಗಿಯಾಗಿಸಿದೆ

ಕನ್ನಡಪ್ರಭ ವಾರ್ತೆ ತುಮಕೂರುಸರ್ಕಾರದ ಅಭಿವೃದ್ದಿ ಕಾಮಗಾರಿಗಳಲ್ಲಿ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರಿಗೆ 1 ಕೋಟಿ ರು.ವರೆಗಿನ ಮೀಸಲಾತಿ ಪ್ರಕಟಿಸಿರುವ ರಾಜ್ಯ ಸರ್ಕಾರ, ಕಳೆದ ಒಂದೂವರೆ ವರ್ಷದಿಂದ ಈ ವರ್ಗದವರಿಗೆ ಒಂದೇ ಒಂದು ಗುತ್ತಿಗೆ ಕಾಮಗಾರಿ ನೀಡದೆ ನಿರುದ್ಯೋಗಿಯಾಗಿಸಿದೆ ಎಂದು ರಾಜ್ಯ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹದೇವಸ್ವಾಮಿ ಆರೋಪಿಸಿದ್ದಾರೆ.ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಳೆದ ಒಂದೂವರೆ ವರ್ಷದಲ್ಲಿ ನೀಡಿರುವ ಎಲ್ಲಾ ಗುತ್ತಿಗೆಗಳು 5-10 ಕೋಟಿ ರು.ಗಳ ಪ್ಯಾಕೇಜ್ ಆಗಿದ್ದು, ಈ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದು ಸರ್ಕಾರವೇ ಸೃಷ್ಟಿಸಿದ ನಿರುದ್ಯೋಗವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಸರ್ಕಾರ 2013ರಲ್ಲಿ ಎಸ್ಸಿ,ಎಸ್ಟಿ ಗುತ್ತಿಗೆ ಮೀಸಲು ಕಾಯ್ದೆ ಮಾಡಿ, 2017ರಲ್ಲಿ ಜಾರಿಗೆ ತಂದಿದೆ. ಸುಮಾರು ನಾಲ್ಕು ವರ್ಷಗಳ ಕಾಲ ಕಾಯ್ದೆ ಜಾರಿಯಾಗದೆ ಈ ವರ್ಗದ ಗುತ್ತಿಗೆದಾರರು ಜಾತಕ ಪಕ್ಷಿಗಳಂತೆ ಕಾಯಬೇಕಾಯಿತು. ಆದರೆ ಇದೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಈ ವರ್ಗದ ಗುತ್ತಿಗೆದಾರರಿಗೆ 2 ಕೋಟಿ ರು.ವರೆಗಿನ ಕಾಮಗಾರಿ ಮಾಡಲು ಅವಕಾಶ ಕೊಡುಬೇಕು ಎಂದು ವಿಧಾನಸಭೆಯಲ್ಲಿ ವಾದ ಮಂಡಿಸಿದ್ದರು. ಆದರೆ ಅವರೇ ಪುನಃ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅದನ್ನು ಜಾರಿ ಮಾಡಿಲ್ಲ. ನಿಜವಾಗಲು ಎಸ್ಸಿ, ಎಸ್ಟಿ ಜನಾಂಗದ ಬಗ್ಗೆ ನಿಮ್ಮ ಕಾಳಜಿ ಇದ್ದರೆ ಮೊದಲು ಮೀಸಲಾತಿ ಮೊತ್ತವನ್ನು 2 ಕೋಟಿ ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಪರಿಶಿಷ್ಟ ಜಾತಿ, ಜನಾಂಗದವರು ಅರ್ಥಿಕವಾಗಿ ಮುಂದೆ ಬರಬೇಕು ಎಂದು ಭಾಷಣ ಬಿಗಿಯುವ ರಾಜಕೀಯ ನಾಯಕರು ಎಸ್ಸಿ,ಎಸ್ಟಿ ಗುತ್ತಿಗೆ ಮೀಸಲು ಕಾಯ್ದೆಯನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಮ್ಮ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಮೀಸಲು ಕ್ಷೇತ್ರಗಳಲ್ಲಿಯೇ ಈ ಕಾಯ್ದೆಗೆ ಬೆಲೆ ಇಲ್ಲ ಎಂದರೆ ಇನ್ನೂ ಸಾಮಾನ್ಯ ಕ್ಷೇತ್ರಗಳಲ್ಲಿ ಗುತ್ತಿಗೆದಾರರ ಪಾಡೇನು ಎಂದು ಪ್ರಶ್ನಿಸಿದರು.

ಎಸ್ಸಿ,ಎಸ್ಟಿ ಗುತ್ತಿಗೆದಾರರು ಇತರೆ ವರ್ಗದ ಗುತ್ತಿಗೆದಾರರ ಜೊತೆಗೆ ಸರ್ಕಾರದ ನಿರ್ಮಾಣ ಸಂಸ್ಥೆಗಳಾದ ನಿರ್ಮಿತಿ ಕೇಂದ್ರ, ಕ್ರೆಡಿಲ್, ಪಿಅರ್.ಇ.ಡಿ ಹಾಗೂ ಶಾಸಕರೊಂದಿಗೂ ಸ್ಪರ್ಧೆ ಮಾಡಬೇಕಾಗಿದೆ. ಶಾಸಕರ ಅನುಮತಿ ಇಲ್ಲದೆ ಒಂದೇ ಒಂದು ಟೆಂಡರ್ ಸಹ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಎಲ್ಲಾ ಶಾಸಕರಿಗೆ ಗುತ್ತಿಗೆ ಮೀಸಲು ಕಾಯ್ದೆ ಕುರಿತು ಕಾರ್ಯಾಗಾರ ನಡೆಸಿ, ಇದರ ಉದ್ದೇಶವನ್ನು ತಿಳಿಸಿ, ಈ ವರ್ಗದ ಗುತ್ತಿಗೆದಾರರಿಗೆ ಕೆಲಸ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯದರ್ಶಿ ಓಂಪ್ರಕಾಶ್,ಜಂಟಿ ಕಾರ್ಯದರ್ಶಿ ಯೋಗೀಶ್, ಖಜಾಂಚಿ ಹೇಮಕುಮಾರ್, ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗೋವಿಂದರಾಜು, ಲಕ್ಷ್ಮಿನರಸಯ್ಯ, ರಂಜನ್.ಎ, ಎಸ್.ಆರ್.ಚಿಕ್ಕಣ್ಣ ಭಾಗವಹಿಸಿದ್ದರು.ಬಾಕ್ಸ್‌

ಬಾಕಿ ಹಣ ಯಾವಾಗ ಬಿಡುಗಡೆ?: ರಾಜ್ಯದಲ್ಲಿ ಸುಮಾರು 14500 ಜನ ಎಸ್ಸಿ,ಎಸ್ಟಿ ಗುತ್ತಿಗೆದಾರರಿದ್ದು, ಇವರಿಗೆ ಸರ್ಕಾರದಿಂದ ಇದುವರೆಗೂ ಸುಮಾರು 500 ಕೋಟಿ ರು.ಗೂ ಹೆಚ್ಚು ಬಾಕಿ ಬರಬೇಕಾಗಿದೆ. ಇಲಾಖೆಗಳು ಎನ್.ಓ.ಸಿ. ಬಿಡುಗಡೆ ಮಾಡುವಾಗ ಎಸ್ಸಿ, ಎಸ್ಟಿ ಗುತ್ತಿಗೆದಾರರ ಬಿಲ್ ಮೊದಲು ಪಾವತಿಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಸರ್ಕಾರದ ಆದೇಶಗಳಿಗೆ ಬೆಲೆ ನೀಡುವುದಿಲ್ಲ. ಇದರಿಂದ ಸಾಲ ಮಾಡಿ ಕಾಮಗಾರಿ ಮುಗಿಸಿದ ಗುತ್ತಿಗೆದಾರರು ಸಾಲ, ಬಡ್ಡಿ, ಚಕ್ರ ಬಡ್ಡಿ ಎಂದು ಪರಿತಪಿಸುವಂತಾಗಿದೆ. ಹಾಗಾಗಿ ಮೊದಲು ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಹದೇವಸ್ವಾಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು