ಕಾಂಗ್ರೆಸ್ ಸರ್ಕಾರ ವಿ.ಪಕ್ಷದ ಶಾಸಕರನ್ನು ಅವಮಾನಿಸುತ್ತಿದೆ: ಎಚ್.ಟಿ.ಮಂಜು

KannadaprabhaNewsNetwork |  
Published : Oct 11, 2025, 12:02 AM IST
10ಕೆಎಂಎನ್ ಡಿ16  | Kannada Prabha

ಸಾರಾಂಶ

ತಾಲೂಕಿನ ಅಭಿವೃದ್ಧಿಗಾಗಿ ಅನುದಾನ ಪಡೆಯಲು ಸಚಿವರ ಮನೆ ಹಾಗೂ ಕಚೇರಿಗಳಿಗೆ ಸಾಕಷ್ಟು ಬಾರಿ ಅಲೆದಾಡಿದ್ದೇನೆ. ಕೇವಲ ಭರವಸೆ ಬಿಟ್ಟರೆ ಅನುದಾನ ನೀಡುವಲ್ಲಿ ಸಚಿವರು ಮನಸ್ಸು ಮಾಡುತ್ತಿಲ್ಲ. ಆದರೂ ನಾನು ಛಲ ಬಿಡದೆ ಹತ್ತಾರು ಬಾರಿ ಪತ್ರ ಹಾಗೂ ಮನವಿಗಳನ್ನು ನೀಡುತ್ತಾ ಬಂದಿದ್ದೇನೆ .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿ.ಪಕ್ಷ ಶಾಸಕರನ್ನು ಶಾಸಕರೇ ಅಲ್ಲ ಎಂದು ಪರಿಗಣಿಸುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಸಚಿವರನ್ನು ಒಳಗೊಂಡ ಸಭೆ ಕರೆಯುತ್ತಾರೆ. ಆದರೆ, ವಿಪಕ್ಷ ಶಾಸಕನಾದ ನನ್ನನ್ನು ಮಾತ್ರ ಸಭೆಗೆ ಆಹ್ವಾನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಶಾಸಕನಾದ ನನಗೆ ಹಾಗೂ ಮತ ನೀಡಿದ ತಾಲೂಕಿನ ಎಲ್ಲಾ ಸಮಸ್ತ ಮತದಾರರಿಗೂ ಮಾಡುತ್ತಿರುವ ಅವಮಾನವಾಗಿದೆ.

ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸರ್ಕಾರ 50 ಕೋಟಿ ರು. ಅನುದಾನ ನೀಡಿದೆ. ನನಗೆ ಮಾತ್ರ 25 ಕೋಟಿ ರು. ಅನುದಾನ ನೀಡಿ ಮಲತಾಯಿಯ ಮಗನಂತೆ ನೋಡುತ್ತಿದೆ ಎಂದು ದೂರಿದರು.

ತಾಲೂಕಿನ ಅಭಿವೃದ್ಧಿಗಾಗಿ ಅನುದಾನ ಪಡೆಯಲು ಸಚಿವರ ಮನೆ ಹಾಗೂ ಕಚೇರಿಗಳಿಗೆ ಸಾಕಷ್ಟು ಬಾರಿ ಅಲೆದಾಡಿದ್ದೇನೆ. ಕೇವಲ ಭರವಸೆ ಬಿಟ್ಟರೆ ಅನುದಾನ ನೀಡುವಲ್ಲಿ ಸಚಿವರು ಮನಸ್ಸು ಮಾಡುತ್ತಿಲ್ಲ. ಆದರೂ ನಾನು ಛಲ ಬಿಡದೆ ಹತ್ತಾರು ಬಾರಿ ಪತ್ರ ಹಾಗೂ ಮನವಿಗಳನ್ನು ನೀಡುತ್ತಾ ಬಂದಿದ್ದೇನೆ ಎಂದರು.

ತಾಲೂಕನ್ನು ಅಭಿವೃದ್ಧಿಪಡಿಸಬೇಕೆಂಬ ಅಪಾರ ಮನಸ್ಸಿದ್ದರೂ ಅನುದಾನದ ಲಭ್ಯತೆ, ತಾರತಮ್ಯ, ಮಲತಾಯಿ ಧೋರಣೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ನನ್ನ ಗುರಿ ತಲುಪಲಾಗುತ್ತಿಲ್ಲ. ಇದರ ನಡುವೆಯೂ ಕ್ಷೇತ್ರದ ಜನರ ಕಷ್ಟ- ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಕಳೆದ 4 ವರ್ಷಗಳ ಹಿಂದೆ ಭಾರೀ ಮಳೆಯಿಂದ ಒಡೆದು ಹೋಗಿದ್ದ ಲೋಕನಹಳ್ಳಿ, ಹುಬ್ಬನಹಳ್ಳಿ, ಅಘಾಲಯ, ಮಾವಿನಕಟ್ಟೆಕೊಪ್ಪಲು, ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಉಚಿತ ಭಾಗ್ಯಗಳನ್ನೇ ಅಭಿವೃದ್ಧಿ ಎನ್ನುವ ಭಾವನೆಯಲ್ಲಿ ಮುಳುಗಿರುವ ರಾಜ್ಯ ಸರ್ಕಾರಕ್ಕೆ ತಾಲೂಕಿನ ಒಡೆದು ಹೋದ ಕೆರೆ ಕಟ್ಟೆಗಳು ಕಾಣುತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಪಕ್ಷ ರಾಜಕಾರಣ ಕೈಬಿಟ್ಟು ಎಲ್ಲಾ ಶಾಸಕರನ್ನು ಸಮಾನವಾಗಿ ನೋಡಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೆ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಗ್ರಂಥಾಲಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. ಇಲ್ಲಿ ಸಿಗುವ ಸಂಪನ್ಮೂಲ ಬಳಸಿಕೊಳ್ಳುವ ಮೂಲಕ ಮಕ್ಕಳು ಓದಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷ ನಾಗೇಂದ್ರ, ಆಶಾ ನಾಗೇಂದ್ರ, ಸದಸ್ಯರಾದ ಪುಟ್ಟರಾಜು, ಮಂಜುನಾಥ್, ಹೇಮಾವತಿ, ದಿವ್ಯಶ್ರೀ, ಲೋಕೇಶ್, ಜಿಲ್ಲಾ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಅಜಯ್‌ ರಾಮೇಗೌಡ, ಗ್ರಾಮದ ಮುಖಂಡರಾದ ಶಂಭು, ಪಾಪೇಗೌಡ, ಶಂಕರೇಗೌಡ, ಉಮೇಶ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ