ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ

KannadaprabhaNewsNetwork |  
Published : Dec 17, 2023, 01:45 AM IST
ಬಿ.ಸಿ. ಪಾಟೀಲ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಆಗುತ್ತಿದ್ದರೂ ಈ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅದರ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರು ಹಣ ಮಾಡುವುದರಲ್ಲೇ ಪೈಪೋಟಿಗಿಳಿದಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಆಗುತ್ತಿದ್ದರೂ ಈ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅದರ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರು ಹಣ ಮಾಡುವುದರಲ್ಲೇ ಪೈಪೋಟಿಗಿಳಿದಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಅಭಿವೃದ್ಧಿಯಂತೂ ರಾಜ್ಯದಲ್ಲಿ ಶೂನ್ಯವಾಗಿದೆ. ಇಂಥ ಸರ್ಕಾರಕ್ಕೆ ಧಿಕ್ಕಾರ ಹಾಕಿ ಪ್ರತಿಭಟಿಸುತ್ತಿದ್ದೇವೆ ಎಂದರು.

ನಮ್ಮ ಸರ್ಕಾರ ಇದ್ದಾಗ ಸ್ಪ್ರಿಂಕ್ಲರ್ ಸೆಟ್‌ಗೆ ₹೧೮೫೦ ಇತ್ತು. ಇಂದು ಸ್ಪ್ರಿಂಕ್ಲರ್‌ಗೆ ₹೪೨೦೦ ಮಾಡಿದ್ದಾರೆ. ಒಂದು ವರ್ಷದಲ್ಲಿ ಹೇಗೆ ಡಬಲ್ ಆಗಿದೆ ಗೊತ್ತಿಲ್ಲ, ಇದರಲ್ಲಿ ಏನೋ ಅವ್ಯವಹಾರ ನಡೆದಿದೆ. ರೈತರ ಮೇಲೆ ಭಾರ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ರೈತರು ಅಲ್ಪಾವಧಿ, ಮಧ್ಯಮಾವಧಿ ಸಾಲ ಕಟ್ಟಿದರೆ ಬಡ್ಡಿ ಬಿಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಬರಗಾಲ ಬಂದು ರೈತರು ಒಂದು ಹೊತ್ತಿಗೆ ಊಟಕ್ಕೂ ಪರದಾಡುತ್ತಿದ್ದಾರೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರಿಗೆ ಅಸಲು ಕಟ್ಟಿ ಎಂದರೆ ಎಲ್ಲಿ ಕಟ್ಟುತ್ತಾರೆ ಎಂದು ಪ್ರಶ್ನಿಸಿದ ಅವರು, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಬಡ್ಡಿ ಬದಲು ಅಸಲು ಮನ್ನಾ ಮಾಡಬೇಕಿತ್ತು. ರೈತರಿಗೆ ಭಿಕ್ಷೆ ಕೊಟ್ಟ ರೀತಿ ಎಕರೆಗೆ ₹೨೦೦೦ ಬರ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ನಮ್ಮ ಸರ್ಕಾರ ೨೨ರಿಂದ ೨೮ ಸಾವಿರ ರು. ವರೆಗೆ ಪರಿಹಾರ ಕೊಟ್ಟಿದೆ. ಸರ್ಕಾರಕ್ಕೆ ಕಿಂಚಿತ್ತೂ ರೈತರ ಬಗ್ಗೆ ಕಾಳಜಿ ಇಲ್ಲ, ಬರೀ ಭ್ರಷ್ಟತೆಯಲ್ಲಿ ಮುಳುಗಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕರಾದ ಎಸ್.ಟಿ. ಸೋಮಶೇಖರ್, ವಿಶ್ವನಾಥ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಐದು ಬೆರಳು ಒಂದೇ ಸಮ ಇರಲ್ಲ, ಒಂದೇ ತರ ಇರಲ್ಲ, ಈಗಾಗಲೇ ಆ ಮೂವರಿಗೆ ಬಿಜೆಪಿಯಿಂದ ನೋಟಿಸ್ ಕೊಡಲಾಗಿದೆ. ಹೇಗೆ ಸಭೆಯಲ್ಲಿ ಭಾಗಿಯಾಗಿದ್ದರು ಎಂಬುದರ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಕೇಳಿದ್ದಾರೆ. ದೇಹ ಇಲ್ಲಿ ಮನಸ್ಸು ಅಲ್ಲಿ ಅಂದರೆ ಆಗಲ್ಲ, ಇದು ದುರದೃಷ್ಟಕರ. ಪಕ್ಷಕ್ಕೂ ಇದರಿಂದ ಮುಜುಗರ. ಅವರು ಒಂದು ನಿರ್ಧಾರ ಮಾಡಬೇಕು. ಹೋಗೋದಿದ್ದರೆ ಹೋಗಬೇಕು, ಇರೋದಿದ್ದರೆ ಇರಬೇಕು ಎಂದರು.

ಸಂಸತ್ ಭವನದ ದಾಳಿ ಸಂದರ್ಭದಲ್ಲಿ ನಾನು ಅಲ್ಲೇ ಇದ್ದೆ. ನಾನು ಕಲಾಪ ನೋಡೋದಕ್ಕೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದೆ. ಕಲಾಪ ನೋಡಿ ನಾನು ಹೊರಗೆ ಬಂದು ೧೦ ನಿಮಿಷಕ್ಕೆ ಆ ಘಟನೆ ನಡೆದಿದೆ. ಇದು ಒಂದು ಪೂರ್ವನಿಯೋಜಿತ ಕೃತ್ಯ. ಅಷ್ಟೊಂದು ಸೆಕ್ಯುರಿಟಿ ಇದ್ದರೂ ಭೇದಿಸಿ ಹೋಗಿದ್ದಾರೆ ಅಂದರೆ ಇದರ ಹಿಂದೆ ವ್ಯವಸ್ಥಿತ ಸಂಚಿದೆ. ಇದರ ಬಗ್ಗೆ ತೀವ್ರ ತನಿಖೆ ಆಗಬೇಕಿದೆ ಎಂದರು.

ಲೋಕಸಭೆಚುನಾವಣೆಗೆ ಸ್ಪರ್ಧಿಸಲು ಸಿದ್ಧ:

ನಾನು ಲೋಕಸಭೆ ಚುನಾವಣೆಯ ಟಿಕೆಟ್‌ಗೆ ಲಾಬಿ ನಡೆಸಲು ದೆಹಲಿಗೆ ಹೋಗಿಲ್ಲ, ಪಕ್ಷ ತೀರ್ಮಾನ ಮಾಡಿ ಟಿಕೆಟ್ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಈ ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ