ಕನ್ನಡಪ್ರಭ ವಾರ್ತೆ ಹೊಸಕೋಟೆ ತಾಲೂಕಿನ ಕೊಳತೂರು ಬಳಿ ನಿರ್ಮಾಣ ಹಂತದಲ್ಲಿರುವ ನೂರು ಹಾಸಿಗೆಗಳ ತಾಯಿ ಮಗುವಿನ ಆಸ್ಪತ್ರೆ ಕಾಮಗಾರಿ ತ್ವರಿತವಾಗಿ ಮುಗಿಯಲಿದ್ದು, ಅಕ್ಟೋಬರ್‌ನಲ್ಲಿ ಆಸ್ಪತ್ರೆ ಉದ್ಘಾಟನೆ ಜೊತೆಗೆ ನೂತನ ತಾಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ತಾಲೂಕಿನ ಕೊಳತೂರು ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಗಳ ತಾಯಿ ಮಗು ಆಸ್ಪತ್ರೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.ರಾಜ್ಯ ಸರ್ಕಾರ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹೆಚ್ಚಿನ ಅನುದಾನ ಒದಗಿಸುವ ಕಾರ್ಯ ಮಾಡುತ್ತಿದೆ. ಕೊಳತೂರು ಬಳಿ ನಿರ್ಮಾಣ ಮಾಡಲಾಗುತ್ತಿರುವ ಈ ಆಸ್ಪತ್ರೆ ಸುಮಾರು 40 ಕೋಟಿ ರು. ವೆಚ್ಚದ್ದಾಗಿದ್ದು, ನಬಾರ್ಡ್‌ನಿಂದ 37 ಕೋಟಿ ರು. ಕಟ್ಟಡ ನಿರ್ಮಾಣಕ್ಕೆ ಹಾಗೂ 3 ಕೋಟಿ ರು. ಯಂತ್ರೋಪಕರಣಗಳ ಖರೀದಿ ಮಾಡಲಿದ್ದೇವೆ. ಆಸ್ಪತ್ರೆಗಳ ನಿರ್ಮಾಣದ ಜೊತೆಗೆ ಸಿಬ್ಬಂದಿ ಒದಗಿಸಿ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲಿದೆ ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ನಗರ ಬೆಂಗಳೂರು ನಗರದ ಸೆರಗಿನಂಚಿನಲ್ಲಿರುವ ಕಾರಣ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ಅದರಿಂದ ತಾಲೂಕಿನ ಅನುಗೊಂಡನಹಳ್ಳಿ ಹಾಗೂ ಸೂಲಿಬೆಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಬೇಕು. ತಾಲೂಕಿನಲ್ಲಿರುವ 29 ಉಪಕೇಂದ್ರಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ಪ್ರಮುಖವಾಗಿ ಹೊಸಕೋಟೆ ತಾಲೂಕು ಆಸ್ಪತ್ರೆಗೆ ಸೀಟಿ ಸ್ಕ್ಯಾನಿಂಗ್ ಯಂತ್ರವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಸಚಿವ ದಿನೇಶ್ ಗುಂಡೂರಾವ್ ನಗರದ ಸಚಿತೆ ಗೇಟ್ ಬಳಿ ಇರುವ ತಾಲೂಕು ಸಾರ್ವಜನಿಕ ಆಸ್ಪತ್ರೆಗೂ ಸಹ ಭೇಟಿ ನೀಡಿ ವ್ಶೆದ್ಯರಿಂದ ಮಾಹಿತಿ ಪಡೆದುಕೊಂಡರು.ಜಿಲ್ಲಾ ಆರೋಗ್ಯ ಅಧಿಕಾರಿ ಸುನಿಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀಣಾ, ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್, ಬಿಎಂಆರ್‌ಡಿಎ ಸದಸ್ಯ ಸುಬ್ಬರಾಜು, ಉದ್ಯಮಿ ಬೈರೇಗೌಡ, ಸೇರಿದಂತೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಜರಿದ್ದರು.
ರಾಜ್ಯಪಾಲರಿಂದ ಪಕ್ಷಪಾತ ಸರಿಯಲ್ಲ: ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಪಕ್ಷಪಾತ ಮಾಡಿದ್ದಾರೆ. ಬಿಜೆಪಿ ರಾಜಕೀಯ ಕುತಂತ್ರದಲ್ಲಿ ರಾಜ್ಯಪಾಲರು ನೇರವಾಗಿ ಭಾಗಿಯಾಗಿದ್ದಾರೆ. ಒಂದು ದೊಡ್ಡ ಹುದ್ದೆಯಲ್ಲಿರುವ ರಾಜ್ಯಪಾಲರು ಸಣ್ಣತನದ ಕೆಲಸ ಮಾಡಿದ್ದಾರೆ. ರಾಜ್ಯಪಾಲರು ತಮ್ಮ ಸ್ಥಾನದ ನಂಬಿಕೆ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಡುವ ಮೂಲಕ ಕೇಂದ್ರ ಬಿಜೆಪಿಯ ಒತ್ತಡಕ್ಕೆ ಮಣಿದಿರಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ಭ್ರೂಣ ಹತ್ಯೆ ವಿರುದ್ಧ ಕಠಿಣ ಕಾನೂನು: ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧವಾಗಿ ಕಠಿಣ ಕ್ರಮಗಳನ್ನು ಸರ್ಕಾರ ರೂಪಿಸಿದ್ದು, ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ಮಾಡಿರುವ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಿ ಪ್ರಕರಣವನ್ನು ಸಹ ದಾಖಲು ಮಾಡಲಾಗಿದೆ. ಪ್ರಮುಖವಾಗಿ ಹೆಣ್ಣು ಭ್ರೂಣ ಹತ್ಯೆ ಮಾಡುವವರಿಗೆ ಕಾನೂನಿನ ಅಡಿಯಲ್ಲಿ ಸಹ ಕಠಿಣ ಕ್ರಮ ಆಗಲಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಕೆಲಸ ಮಾಡುತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.