ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪುರಸಭೆಯ ಒಟ್ಟು ೨೩ ಸದಸ್ಯರ ಬಲ ಹೊಂದಿದೆ. ೨೩ ಸದಸ್ಯರಲ್ಲಿ ಕಾಂಗ್ರೆಸ್ ೮ ಸದಸ್ಯರ ಜತೆಗೆ ಎಸ್‌ಡಿಪಿಐ ಸದಸ್ಯರೊಬ್ಬರು ಸೇರಿ ೯ ಸದಸ್ಯರ ಬಲವಾಗಲಿದ್ದು, ಶಾಸಕ, ಸಂಸದರ ಮತ ಸೇರಿ ೧೧ ಸದಸ್ಯರಾಗಲಿದ್ದಾರೆ. ಪುರಸಭೆ ಅಧಿಕಾರ ಹಿಡಿಯಲು ೧೩ ಮ್ಯಾಜಿಕ್ ನಂಬರಾಗಿದ್ದರೂ ಎರಡು ಮತಗಳ ಕೊರತೆ ಇದ್ದರೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪುರಸಭೆ ಅಧಿಕಾರ ನಮ್ಮದೇ ಎಂದು ಹೇಳಿಕೊಂಡಿದ್ದಾರೆ.
ಇಬ್ಬರು ಸದಸ್ಯರು ದೂರ?:ಪುರಸಭೆಯಲ್ಲಿ ಬಿಜೆಪಿಯ ೧೩ ಸದಸ್ಯರು ಇದ್ದಾರೆ. ೧೩ ಸದಸ್ಯರಲ್ಲಿ ಬಿಜೆಪಿ ಸದಸ್ಯ ರಮೇಶ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ವರ್ಷಗಳೇ ಕಳೆದರೆ, ಮತ್ತೋರ್ವ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿ ಹಾಗೂ ಅವರ ಪತಿ ಬಸವರಾಜು ಇತ್ತೀಚಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಸರಿದಿದ್ದಾರೆ.
ಇವ್ರ ಬೆಂಬಲ ಯಾರಿಗೆ?: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಪುರಸಭೆ ಸದಸ್ಯರಾದ ರಮೇಶ್, ರಾಣಿ ಲಕ್ಷ್ಮೀದೇವಿ ಹಾಗೂ ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ಇವರ ಬೆಂಬಲ ಯಾರಿಗೆ ಎಂದರೆ ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ಕಂಡರೂ ಬಿಜೆಪಿ ಸದಸ್ಯರಾದ ರಮೇಶ್ ಹಾಗೂ ರಾಣಿ ಲಕ್ಷ್ಮೀದೇವಿಗೆ ಪಕ್ಷಾಂತರ ನಿಷೇಧ ಅಡ್ಡವಂತೂ ಬರಲಿದೆ. ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ಪಕ್ಷೇತರನಾಗಿ ಆಯ್ಕೆಯಾಗಿರುವ ಕಾರಣ ಯಾವ ಪಕ್ಷದತ್ತ ಹೋಗಲು ಅವಕಾಶವಿದೆ ಆದರೆ ಬಿಸಿಎಂ(ಬಿ)ಗೆ ಅಧ್ಯಕ್ಷ ಸ್ಥಾನ ಮೀಸಲಾದ ಕಾರಣ ಅಧ್ಯಕ್ಷ ಸ್ಥಾನ ಮೊದಲು ಕೊಟ್ಟವರರಿಗೆ ನನ್ನ ಮತ ಎಂದು ಹೇಳಿಕೊಂಡಿದ್ದಾರೆ.
ಗುಂಡ್ಲುಪೇಟೆ ಪುರಸಭೆ ಕಾರ್ಯಾಲಯ.
ಎಚ್.ಎಂ.ಗಣೇಶ್ ಪ್ರಸಾದ್