ಕಾಲ್ತುಳಿತದಲ್ಲಿ ಅಮಾಯಕರ ಸಾವಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಬಿಜೆಪಿ ಆರೋಪ

KannadaprabhaNewsNetwork |  
Published : Jun 07, 2025, 12:57 AM IST
6ಕೆಎಂಎನ್ ಡಿ11 | Kannada Prabha

ಸಾರಾಂಶ

ಹೈಕೋರ್ಟ್‌ ಸುಮೋಟೋ ಕೇಸ್ ದಾಖಲಿಸಿಕೊಂಡ ನಂತರ ಇವರಿಗೆ ನಡುಕ ಉಂಟಾಗಿದೆ. ಆದ ಕಾರಣ ಅಮಾಯಕ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಘಟನೆಗೆ ನೇರ ಕಾರಣವಾಗಿರುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಲ್ಲಿ ಅಮಾಯಕರ ಸಾವಿಗೆ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತವೇ ಕಾರಣ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮಾಜಿ ಡಿಸಿಎಂ ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸೇರಿದ ಮುಖಂಡರು, ಕಾರ್ಯಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನಂತರ ಸಿಎಂ, ಡಿಸಿಎಂ ಸೇರಿದಂತೆ ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.

ಪೊಲೀಸರು ವಿಜಯೋತ್ಸವ ಬೇಡ ಎಂದು ಆಯೋಜಕರ ಮನವಿಯನ್ನು ತಿರಸ್ಕರಿಸಿದ್ದರು. ಆದರೆ, ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಮುಂಚೂಣಿಯಲ್ಲಿ ನಿಂತು ವಿಜಯೋತ್ಸವ ಆಚರಿಸುವ ನೆಪವೊಡ್ಡಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ ಎದು ಕಿಡಿಕಾರಿದರು.

ಇಷ್ಟು ಸಾಲದೆಂಬಂತೆ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮಾಡಲು ಅನುಮತಿ ಕೊಟ್ಟಿಲ್ಲ ಎಂದು ಆಮೇಲೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಮತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ಬೇಜವಾಬ್ದಾರಿಯಿಂದ 11 ಮಂದಿ ಪ್ರಾಣ ಹೋಗಿದೆ. ಇನ್ನು ಎಷ್ಟು ಜನ ಸತ್ತಿದ್ದಾರೆಂಬುದು ಲೆಕ್ಕ ಸಿಗುತ್ತಿಲ್ಲ. ಇವರು ಹೇಳುತ್ತಿರುವ ಮಾಹಿತಿ ಸುಳ್ಳು. ಕೆಲವರು ನಾಪತ್ತೆಯಾಗಿದ್ದಾರೆ ಎಂದು ದೂರಿದರು.

ಹೈಕೋರ್ಟ್‌ ಸುಮೋಟೋ ಕೇಸ್ ದಾಖಲಿಸಿಕೊಂಡ ನಂತರ ಇವರಿಗೆ ನಡುಕ ಉಂಟಾಗಿದೆ. ಆದ ಕಾರಣ ಅಮಾಯಕ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಘಟನೆಗೆ ನೇರ ಕಾರಣವಾಗಿರುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮುಂಜಾಗ್ರತೆ ಇಲ್ಲದೆ ವಿಜಯೋತ್ಸವ ಮಾಡಿದ್ದು ಸರ್ಕಾರದ ಬೇಜವಾಬ್ದಾರಿತವಾಗಿದೆ. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಒತ್ತಾಯಿಸಿದರು.

ಇವರ ರಾಷ್ಟ್ರೀಯ ಅಧ್ಯಕ್ಷರು ಚಿಟ್‌ಪುಟ್ ಯುದ್ಧ ಎನ್ನುತ್ತಾರೆ. ಕೆ.ಆರ್.ಪೇಟೆಯಲ್ಲಿ ದಲಿತ ಯುವಕನ ಸಾವಾಗಿದ್ದಾರೂ ಅದಕ್ಕೆ ಸಂಬಂಧಿಸಿದಂತೆ ಸರಿಯಾದ ತನಿಖೆ ಮಾಡಿಲ್ಲ. ಮಂಗಳೂರಿನಲ್ಲಿ ಗಡೀಪಾರು ಮಾಡುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಸಚ್ಚಿದಾನಂದ, ಎಚ್.ಆರ್.ಅರವಿಂದ್, ಅಶೋಕ್, ಡಾ.ಸದಾನಂದ, ಸಿ.ಟಿ.ಮಂಜುನಾಥ್, ವಿವೇಕ್, ಶಿವಕುಮಾರ್ ಆರಾಧ್ಯ, ಪ್ರಸನ್ನ, ನಾಗಾನಂದ್, ಎಚ್.ಆರ್.ಅಶೋಕ್, ವಸಂತ್, ಹನುಮಂತ, ವಿನೋಭ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ