ವಿದ್ಯಾರ್ಥಿ ಜೀವನದಲ್ಲೇ ಗಿಡ ಬೆಳೆಸುವ ಆಸಕ್ತಿ ಬೆಳಸಿ: ಎಂ.ಟಿ.ಕೃಷ್ಣಪ್ಪ

KannadaprabhaNewsNetwork |  
Published : Jun 07, 2025, 12:53 AM IST
6 ಟಿವಿಕೆ 5 - ತುರುವೇಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹಲಸಿನ ಗಿಡ ನೆಟ್ಟರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಎನ್.ಎಸ್.ಲಿಂಗರಾಜು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಇದ್ದರು. | Kannada Prabha

ಸಾರಾಂಶ

ಕೈಗಾರಿಕೆಗಳಿಂದ ಹೊರ ಬರುವ ತ್ಯಾಜ್ಯ ಕೆರೆ, ನದಿ ಸೇರುತ್ತಿದೆ. ಮತ್ತೊಂದೆಡೆ ಕಾಡು ಅಳಿದು ಹವಾಮಾನದಲ್ಲಿ ವೈಪರೀತ್ಯಗಳಾಗುತ್ತಿವೆ. ಉತ್ತಮ ಗಾಳಿ, ಆಹಾರ ಸಿಗದೆ ಮನುಷ್ಯ ಹಲವು ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಿದ್ಯಾರ್ಥಿ ಜೀವನದಲ್ಲೇ ಪರಿಸರ ಪ್ರೇಮವನ್ನು ಮಕ್ಕಳಲ್ಲಿ ಬೆಳೆಸಬೇಕು. ಹಸಿರೇ ಉಸಿರು ಎಂಬ ಭಾವನೆ ಬಂದಾಗ ಮಾತ್ರ ಎಲ್ಲರಲ್ಲೂ ಪರಿಸರ ಕಾಳಜಿ ಬರಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಲಸಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರೀಕರಣದ ಬದುಕಿನ ಧಾವಂತದಲ್ಲಿ ಗಿಡ, ಮರಗಳನ್ನು ಬೆಳೆಸಬೇಕೆಂಬ ಇಚ್ಛಾಶಕ್ತಿ ಜನರಲ್ಲಿ ಕುಗ್ಗಬಾರದು. ಮನುಷ್ಯ, ಪ್ರಾಣಿ, ಪಕ್ಷಿ ಸೇರಿ ಸಕಲ ಜೀವರಾಶಿಗಳಿಗೂ ಆಶ್ರಯತಾಣ ಪ್ರಕೃತಿಯೇ ಆಗಿದೆ. ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಕಾಡು ಬೆಳೆಸಬೇಕು. ಆಧುನೀಕರಣ ಮತ್ತು ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ನಾಶ ಮಾಡಲಾಗುತ್ತಿದೆ. ಆದರೆ ಕಾಡು ನಾಶ ಮಾಡಿದಷ್ಟೇ ಪ್ರಮಾಣದಲ್ಲಿ ಮರಗಳನ್ನು ಬೆಳೆಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೈಗಾರಿಕೆಗಳಿಂದ ಹೊರ ಬರುವ ತ್ಯಾಜ್ಯ ಕೆರೆ, ನದಿ ಸೇರುತ್ತಿದೆ. ಮತ್ತೊಂದೆಡೆ ಕಾಡು ಅಳಿದು ಹವಾಮಾನದಲ್ಲಿ ವೈಪರೀತ್ಯಗಳಾಗುತ್ತಿವೆ. ಉತ್ತಮ ಗಾಳಿ, ಆಹಾರ ಸಿಗದೆ ಮನುಷ್ಯ ಹಲವು ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಹಾಗಾಗಿ ಮುಂದಿನ ಪೀಳಿಗೆ ಆರೋಗ್ಯವಾಗಿರಲು ಶಾಲಾ ಹಂತದಲ್ಲೇ ಮಕ್ಕಳಿಗೆ ಗಿಡ ನೆಟ್ಟು ಬೆಳೆಸುವ ಆಸಕ್ತಿ ಮೂಡಿಸಬೇಕು ಎಂದು ಶಿಕ್ಷಕರು, ವಿದ್ಯಾರ್ಥಿಗಳಿಗೆ ಶಾಸಕರು ಕಿವಿಮಾತು ಹೇಳಿದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಎನ್.ಎಸ್.ಲಿಂಗರಾಜು ಮಾತನಾಡಿ, ಈ ಆವರಣದಲ್ಲಿ ಹಲಸು, ಮಾವು, ಜಮ್ಮು ನೇರಳೆ, ಮಹಾಘನಿ, ಆಲ, ಹಿಪ್ಪೆ, ಹೊಂಗೆ ಸೇರಿದಂತೆ ವಿವಿಧ ಜಾತಿಯ 150 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುತ್ತಿದೆ. ಈ ಆವರಣವು ಸಂರಕ್ಷಣಾ ವಲಯವಾಗಿರುವುದರಿಂದ ಸಸಿಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತಿದೆ. ಮಕ್ಕಳಿಗೆ ಗಿಡ ಬೆಳೆಸುವ ಮನೋಭಾವವನ್ನು ಪ್ರತಿದಿನ ಶಾಲಾ ಆವರಣದಲ್ಲಿ ನೆಟ್ಟಿರುವ ಸಸಿಗಳಿಗೆ ನೀರುಣಿಸುವ ಮೂಲಕ ಬೆಳೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಕಂದಾಯ ನಿರೀಕ್ಷಕ ಪ್ರಶಾಂತ್ ಆರ್. ಭದ್ರಣ್ಣವರ್, ನಾಮಿನಿ ಸದಸ್ಯ ಶ್ರೀನಿವಾಸ್‌, ಸಿಬ್ಬಂದಿ ಸದಾನಂದ್, ಕಾಂತರಾಜು, ಮುಖ್ಯಶಿಕ್ಷಕ ಸತೀಶ್ ಕುಮಾರ್, ಸಹ ಶಿಕ್ಷಕ ಲೋಕೇಶ್, ಎಸ್‌ ಡಿ ಎಂ ಸಿ ಅಧ್ಯಕ್ಷ ವಸಂತಕುಮಾರ್, ಅರಣ್ಯ ಇಲಾಖಾ ಸಿಬ್ಬಂದಿ ತಿಪ್ಪೇಶ್‌, ಪಾಟೀಲ್‌, ಮಂಜುನಾಥ್‌, ಗಂಗಾಧರ್, ಮುಖಂಡರಾದ ವೆಂಕಟಾಪುರ ಯೋಗೀಶ್, ಕಾಂತರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ